ನಟ ಸಲ್ಮಾನ್​ ಖಾನ್​ ರೊಂದಿಗೆ ತುಳು ಭಾಷೆಯಲ್ಲಿ ಮಾತನಾಡಿದ ನಟಿ ಶಮಿತಾ ಶೆಟ್ಟಿ: ವಿಡಿಯೋ ವೈರಲ್!‌

ಮುಂಬೈ: ಸದಾ ಕಿರಿಕ್ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ಬಾಲಿವುಡ್ ಕ್ವೀನ್ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಯವರು ಇತ್ತೀಚೆಗೆ 'ಬಿಗ್ ಬಾಸ್ ಸೀಸನ್ 15' ನಲ್ಲಿ ನಿರೂಪಕ ಸಲ್ಮಾನ್ ಖಾನ್ ರೊಂದಿಗೆ ತುಳು ಭಾಷೆಯಲ್ಲಿಯೇ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. 

ಸಹೋದರಿ ನಟಿ ಶಿಲ್ಪಾ ಶೆಟ್ಟಿ, ತಮ್ಮ ಭಾವ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಶಮಿತಾ ಶೆಟ್ಟಿ ಬಿಗ್​ ಬಾಸ್​ ಓಟಿಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ ಅವರಿಗೆ ಬಳಿಕ ನಟ ಸಲ್ಮಾನ್​ ಖಾನ್​ ನಿರೂಪಣೆ ಮಾಡುತ್ತಿರುವ ‘ಬಿಗ್​ ಬಾಸ್​ 15’ರಲ್ಲಿ ಸ್ಪರ್ಧಿಸುವ ಅವಕಾಶ ದೊರಕಿತ್ತು. ಈ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಸಲ್ಮಾನ್​ ಖಾನ್​ ಜೊತೆ ಅವರು ತಮ್ಮ ಮಾತೃಭಾಷೆ ತುಳುವಿನಲ್ಲಿಯೇ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಎಂಚ ಉಲ್ಲರ್(‘ಹೇಗೆ ಇದ್ದೀರಿ?’), ಸೌಖ್ಯ(‘ಚೆನ್ನಾಗಿದ್ದೇನೆ’) ಎಂಬಿತ್ಯಾದಿ ಪದಗಳನ್ನು ತುಳುನಲ್ಲಿ ಹೇಗೆ ಹೇಳಬೇಕು ಎಂಬುದನ್ನು ಸಲ್ಮಾನ್​ ಖಾನ್​ಗೆ ಶಮಿತಾ ಕಲಿಸಿಕೊಟ್ಟಿದ್ದಾರೆ. ಆಗ ಸಲ್ಮಾನ್ ಖಾನ್ ಅವರು 'ತುಳು ಬರ್ಪುಂಡೇ' (ತುಳು ಬರುತ್ತದಾ) ಎಂದು ಕೇಳಿದ್ದಾರೆ. ಅದಕ್ಕೆ ಶಮಿತಾ ಹ್ಞಾಂ ತುಳು ಬರ್ಪುಂಡು ಒಂಜೊಂಜಿ (ಹ್ಞಾಂ ತುಳು ಬರುತ್ತದೆ, ಒಂದೊಂದು) ಎಂದು ಹೇಳಿದ್ದಾರೆ.




ಮೂಲತಃ ಮಂಗಳೂರಿನ ತುಳು ಮೂಲದವರಾದ ಶಮಿತಾ ಶೆಟ್ಟಿ  ಕುಟುಂಬದವರು ಮುಂಬೈನಲ್ಲಿಯೇ ವಾಸವಾಗಿದ್ದಾರೆ. ಸಾಕಷ್ಟು ವರ್ಷಗಳ ಹಿಂದಿನಿಂದಲೇ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಮುಂಬೈ ವಾಸಿಯಾಗಿದ್ದರೂ,  ಅವರು ತುಳುವಿನ ನಂಟು ಬಿಟ್ಟಿರಲಿಲ್ಲ. ಅನೇಕ ವೇದಿಕೆಗಳಲ್ಲಿ ನಟಿ ಶಿಲ್ಪಾ ಶೆಟ್ಟಿಯವರು ತುಳು ಮಾತನಾಡಿದ್ದರು. ಈಗ ಶಮಿತಾ ಶೆಟ್ಟಿಯವರು ಬಿಗ್​ ಬಾಸ್​ನಲ್ಲಿ ಮಾತೃಭಾಷೆಯ ಅಭಿಮಾನ ಮೆರೆದಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ.