ಡುಪ್ಲೆಕ್ಸ್ ಮನೆಗಳ ಮೇಲ್ಗಡೆ ಪಾರಿವಾಳ ಹಾರಿಸಿಬಿಟ್ಟು ಕಳವು‌ ಕೃತ್ಯ: ಕಂಬಿ ಹಿಂದೆ ಬಂಧಿಯಾದ ಖತರ್ನಾಕ್ ಕಳ್ಳ

ಬೆಂಗಳೂರು: ಡುಪ್ಲೆಕ್ಸ್ ಮನೆಗಳ ಮೇಲ್ಗಡೆ ಪಾರಿವಾಳ ಹಾರಿಸಿಬಿಟ್ಟು ಕಳವು‌ ಕೃತ್ಯಗೈಯುತ್ತಿದ್ದ ಖತರ್ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರಿನ ಬ್ಯಾಡ್​ ನಾಗು ಅಲಿಯಾಸ್​​ ನಾಗೇಂದ್ರ ಜಿ. ಬಂಧಿತ ಆರೋಪಿ. ಇದೀಗ ಆತ ಎಸಗಿದ್ದ 3 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ನಗರದ ಇಟ್ಟಮಡು ನಿವಾಸಿ ಸೂರ್ಯನಾರಾಯಣ ರೆಡ್ಡಿ ಎಂಬುವರು ನೀಡಿರುವ ದೂರಿನ ಮೇರೆಗೆ ಚನ್ನಮ್ಮನಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ನಾಗೇಂದ್ರನಿಂದ 4.40 ಲಕ್ಷ ರೂ. ಬೆಲೆ ಬಾಳುವ 100.6 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈ ಖತರ್ನಾಕ್ ಕಳ್ಳ ನಾಗೇಂದ್ರ ಜಿ. ಮೊದಲಿಗೆ ಐಷಾರಾಮಿ ಡುಪ್ಲೆಕ್ಸ್ ಮನೆಗಳ ಮೇಲೆ ಕಣ್ಣುಹಾಕಿ ಗುರುತಿಸಿಕೊಳ್ಳುತ್ತಿದ್ದ. ಬಳಿಕ ಆ ಮನೆಗಳ ಮೇಲೆ ಪಾರಿವಾಳ ಹಾರಿಸಿಬಿಟ್ಟು, ನಿಮ್ಮ ಮನೆ ಮೇಲೆ ಪಾರಿವಾಳ ಕೂತಿದೆ ಎಂದು ಮನೆಯೊಳಗೆ ಪ್ರವೇಶ ಪಡೆಯುತ್ತಿದ್ದ. 

ಡುಪ್ಲೆಕ್ಸ್ ಮನೆಯೊಳಗಿನಿಂದ ಬಾಲ್ಕನಿ ಟೆರೇಸಿಗೆ ಬರುವ ಸಂದರ್ಭದಲ್ಲಿ ಕೇವಲ ಕಣ್ಣಿನಲ್ಲಿಯೇ ಮನೆಯನ್ನು ಸ್ಕ್ಯಾನ್ ಮಾಡುತ್ತಿದ್ದ. ಬಳಿಕ ಯಾರೂ ಇಲ್ಲದ ಸಂದರ್ಭ ಅಥವಾ ರಾತ್ರಿ ವೇಳೆ ಮನೆಗೆ ನುಗ್ಗಿ ತನ್ನ ಕೈ ಚಳಕ ತೋರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.