ಮಂಗಳೂರು ದಸರಾ ವೀಕ್ಷಿಸಿ ಮರಳಿ ಮನೆಗೆ ಹೋಗುತ್ತಿದ್ದಾಗ ಬೈಕ್ ಅಪಘಾತ: ಯುವಕರಿಬ್ಬರು ದುರ್ಮರಣ

ಉಳ್ಳಾಲ(ದಕ್ಷಿಣ ಕನ್ನಡ):  ಮಂಗಳೂರು ದಸರಾ ವೀಕ್ಷಣೆಗೆ ಶ್ರೀಕ್ಷೇತ್ರ ಕುದ್ರೋಳಿಗೆ ಬಂದು ಮರಳಿ ಹೋಗುತ್ತಿದ್ದ ವೇಳೆ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ ರೋಡ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಕಾಸರಗೋಡು ಜಿಲ್ಲೆಯ ಕುಂಬ್ಳೆ ನಿವಾಸಿಗಳಾದ ಕೃಷ್ಣಪ್ರಸಾದ್ (26) ಮತ್ತು ಪ್ರಜೀತ್ (24) ಮೃತ ದುರ್ದೈವಿಗಳು. 

ನಿನ್ನೆ ರಾತ್ರಿ ಮೃತ ಕೃಷ್ಣಪ್ರಸಾದ್ ಮತ್ತು ಪ್ರಜೀತ್ ದಸರಾ ಕಾರ್ಯಕ್ರಮ ನೋಡಲು ಕುದ್ರೋಳಿಗೆ ಆಗಮಿಸಿ ಮರಳಿ ಮನೆ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಅಪಘಾತ ಸಂಭವಿಸಿದೆ ಎನ್ನಲಾಗಿದೆ.‌
ಆದರೆ ಯುವಕರಿಬ್ಬರ ರಕ್ಷಣೆಗೆ ಧಾವಿಸಿದ ಕಾರು ಚಾಲಕನ ವಿರುದ್ಧವೇ ಸ್ಥಳೀಯರು ಆರೋಪಿಸಿದ್ದರು. ಆದರೆ ಪೊಲೀಸರು ವಿಚಾರಣೆ ವೇಳೆ ಆತನ ತಪ್ಪಿಲ್ಲವೆಂದು ತಿಳಿದುಬಂದಿದೆ. 

ಮೃತರಿಬ್ಬರು ಹೆಲ್ಮೆಟ್ ಧರಿಸದೇ ಇದ್ದುದರಿಂದ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಬೈಕ್ ಸ್ಕಿಡ್​ ಆಗಿದೆಯೋ? ಅಥವಾ ಕಾರು ಡಿಕ್ಕಿ ಹೊಡೆದಿದೆಯೋ ? ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.