ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ: ಮಂಗಳೂರಿನ 29 ವರ್ಷದ ಯುವಕನ ತಲೆ ಮೇಲೆ ಹರಿದ ಮೀನಿನ ಟೆಂಪೋ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಗಳೂರಿನ 29 ವರ್ಷದ ಯುವಕ ಮೃತಪಟ್ಟಿದ್ದಾರೆ


ಮಂಗಳೂರಿನ ಕುಂಟಲ್ಪಾಡಿ ಪದವು ನಿವಾಸಿ ಸಚಿನ್ (29) ಮೃತ ಯುವಕ.  ಉಪ್ಪಿನಂಗಡಿಯ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ   ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಿಂದ ಬಂದ ಟೆಂಪೋವೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. 

ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ  ಬರುತ್ತಿದ್ದ ಮೀನು ಸಾಗಾಟದ ಟೆಂಪೋ ಸಣ್ಣಂಪಾಡಿ ಎಂಬಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಸ್ಕೂಟರ್ ನಲ್ಲಿ ಇಬ್ಬರಿದ್ದು ಇದರಲ್ಲಿ ರಸ್ತೆಗೆಸೆಯಲ್ಪಟ್ಟ ಸಚಿನ್ ಎಂಬವರ ತಲೆಯ ಮೇಲೆ ಟೆಂಪೋದ ಚಕ್ರಗಳು ಹರಿದಿದೆ. ಸಚಿನ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಹಸವಾರ ಬೆಳ್ತಂಗಡಿಯ ಅಂಕಿತ್ ಗಾಯಗೊಂಡಿದ್ದು, ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ  ಟೆಂಪೋವು ರಾಷ್ಟ್ರೀಯ ಹೆದ್ದಾರಿ ಬದಿಯ ತೋಡಿಗೆ ಇಳಿದಿದೆ.