ಡೇಟಿಂಗ್ ಆ್ಯಪ್ ನಲ್ಲಿ ಖಾತೆ ತೆರೆದ ಮಹಿಳೆಗೆ 18.29 ಲಕ್ಷ ರೂ. ದೋಖಾ ಮಾಡಿದ ವಂಚಕ

ಬೆಂಗಳೂರು: ಡೇಟಿಂಗ್​ಗಾಗಿ ಹಾತೊರೆಯುತ್ತಿದ್ದ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೋರ್ವರು ಡೇಟಿಂಗ್​ ಆ್ಯಪ್​ನಲ್ಲಿ ಅಪರಿಚಿತನ ಗೆಳೆತನ ಬೆಳೆಸಿ, ಆತನಿಂದ ವಂಚನೆಗೊಳಗಾದ ಘಟನೆ ನಡೆದಿದೆ.  

ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಆಸ್ಟಿನ್​ಟೌನ್ ನಿವಾಸಿ ನಿಲೋಫರ್ (37) ವಂಚನೆಗೊಳಗಾದ ಮಹಿಳೆ.

ಡೇಟಿಂಗ್ ಮಾಡಬೇಕೆಂಬ ಉದ್ದೇಶದಿಂದ ನಿಲೋಫರ್ ಡೇಟಿಂಗ್ ಆ್ಯಪ್​ನಲ್ಲಿ​ ಖಾತೆ ತೆರೆದಿದ್ದರು. ಅಲ್ಲಿ ಸ್ನೇಹಿತನಾದ ಅಪರಿಚಿತನೋರ್ವ ತಾನು ವಿದೇಶದಲ್ಲಿರುವುದಾಗಿ ನಂಬಿಸಿದ್ದ. ತಾನು ವಿದೇಶದಿಂದ ಬಂದು ನಿನ್ನನ್ನೇ ಮದುವೆಯಾಗುವುದಾಗಿಯೂ ಭರವಸೆ ಕೊಟ್ಟಿದ್ದ. ಆತನ ಮಾತಿಗೆ ಮರುಳಾಗಿರುವ ನಿಲೋಫರ್ ಆತನನ್ನೇ ವಿವಾಹವಾಗಲು ಒಪ್ಪಿದ್ದರು.  

ಆದರೆ ಸೆ.30ರಂದು ನಿಲೋಫರ್​ಗೆ ಕರೆ ಮಾಡಿದ ಆರೋಪಿ, ತನ್ನ ಉದ್ಯಮ ನಷ್ಟದಲ್ಲಿದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಸ್ವಲ್ಪ ಹಣದ  ಸಹಾಯ ಮಾಡಿದಲ್ಲಿ ಮುಂದಿನ ತಿಂಗಳು ಬೆಲೆ ಬಾಳುವ ಉಡುಗೊರೆಯೊಂದಿಗೆ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿದ ನಿಲೋಫರ್, ಸೆ.30ರಿಂದ ಅ.4ರ ವರೆಗೆ ಹಂತಹಂತವಾಗಿ 18.29 ಲಕ್ಷ ರೂ.ವನ್ನು ಆರೋಪಿಯ ಖಾತೆಗೆ ವರ್ಗಾಯಿಸಿದ್ದರು. 

ಲಕ್ಷಾಂತರ ರೂ. ಹಣ ಜಮೆಯಾಗುತ್ತಿದ್ದಂತೆ ಆರೋಪಿ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಮತ್ತೆ ಆತ ಕರೆ ಮಾಡುತ್ತಲೂ ಇರಲಿಲ್ಲ. ಆಗಲೇ ಆಕೆಗೆ ತಾನು ಮೋಸ ಹೋಗಿರುವುದನ್ನು ಅರಿವಿಗೆ ಬಂದಿದೆ. ತಕ್ಷಣ ಮೋಸಹೋದ ನಿಲೋಫರ್ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.