Udupi: ಹೆರಿಗೆಯಾದ ತಕ್ಷಣ ಮೃತಪಟ್ಟ ಶಿಕ್ಷಕಿ: ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ

 ಉಡುಪಿ: ಕಲಬುರಗಿಯಲ್ಲಿನ ಜಿಮ್ಸ್​ ಆಸ್ಪತ್ರೆಯಲ್ಲಿ ತಾಯಿ ಮತ್ತು ನವಜಾತ ಶಿಶು ಮೃತಪಟ್ಟಿರುವ ಘಟನೆಯು ಮರೆಯುವ ಮುನ್ನವೇ ಉಡುಪಿಯಲ್ಲಿ ಇಂತಹದೇ ಒಂದು  ಪ್ರಕರಣ ನಡೆದಿದೆ‌. ಇದರಲ್ಲಿಯೂ ವೈದ್ಯರ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಸಾವು ಎಂಬ ಆರೋಪ ಕೇಳಿಬಂದಿದೆ.  


ಉಡುಪಿಯ ಬಿ.ಆರ್. ಶೆಟ್ಟಿ ಉಚಿತ ಹೆರಿಗೆ ಆಸ್ಪತ್ರೆಯಲ್ಲಿ ಕೋಟೇಶ್ವರದ ಶಿಕ್ಷಕಿ ಉಷಾ ಎಂಬವರು ಗಂಡು ಮಗುವಿಗೆ ಜನ್ಮವಿತ್ತ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾಗಿದ್ದಾರೆ.  ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಆಸ್ಪತ್ರೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.


 ಸ್ಥಳಕ್ಕೆ ಆಗಮಿಸಿರುವ ಉಡುಪಿ ನಗರ ಠಾಣೆ ಪೊಲೀಸರು ಪರಿಸ್ಥಿತಿ ಕೈಮೀರದಂತೆ ಯತ್ನಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಸರ್ಜನ್ ಮತ್ತು ಜಿಲ್ಲಾ ವೈದ್ಯಾಧಿಕಾರಿ ಕೂಡ ಭೇಟಿ ನೀಡಿದ್ದಾರೆ.   ಹೆರಿಗೆಯಾದ ತಕ್ಷಣ ಉಷಾ ಅವರಲ್ಲಿ ಮೂರ್ಛೆ ರೋಗ ಕಾಣಿಸಿಕೊಂಡಿದೆ. ತಕ್ಷಣ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಾಧಿಕಾರಿಯವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಮಾಧಾನಗೊಳ್ಳದ ಸಂಬಂಧಿಕರು, ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.