ನವದೆಹಲಿ: ವಿವಾಹೇತರ ದೈಹಿಕ ಸಂಬಂಧ ಹೊಂದಿದೆ ಎಂದು ಆರೋಪಿಸಿ ಜೋಡಿಯೊಂದನ್ನು ನಗ್ನಗೊಳಿಸಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ರಾಜ್ಯದ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 50-60 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಡುಮ್ಕಾ ಜಿಲ್ಲೆಯ ಬಡ್ತಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ವಿವಾಹಿತ ಮಹಿಳೆಯೊಂದಿಗೆ ಯುವಕನೋರ್ವನು ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆಂದು ವರದಿ ಬಂದಿದೆ.
ಮಹಿಳೆ ಹಾಗೂ ಆಕೆಯ ಪ್ರಿಯಕರ ಇಬ್ಬರೂ ದಿನಗೂಲಿ ಕಾರ್ಮಿಕರಾಗಿದ್ದು, ಒಂದೇ ಗ್ರಾಮದವರಾಗಿದ್ದರು. ಪ್ರಿಯಕರ ಮಂಗಳವಾರ ಮಹಿಳೆಯನ್ನು ಭೇಟಿಯಾಗಲು ಬಂದಿದ್ದಾನೆ. ಈ ಸಂದರ್ಭ ಗ್ರಾಮಸ್ಥರೆಲ್ಲಾ ಒಂದಾಗಿ ಇಬ್ಬರನ್ನೂ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಇಬ್ಬರನ್ನೂ ಬೆತ್ತಲೆ ಮಾಡಿ ಒಂದು ಕಿಲೋ ಮೀ. ವರೆಗೆ ಮೆರವಣಿಗೆ ಮಾಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಲಭ್ಯವಾದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.