ಅತ್ತಿಗೆಯ ಜೊತೆ ಮೈದುನನ ಚಕ್ಕಂದ- ತಮ್ಮನನ್ನೆ ಕೊಂದ ಅಣ್ಣ!

ಮೈಸೂರು: ಅತ್ತಿಗೆಯ ಜೊತೆಯಲ್ಲಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾನೆಂದು ತಮ್ಮನನ್ನೇ ಉಸಿರುಗಟ್ಟಿಸಿ ಅಣ್ಣನೇ ಕೊಲೆಗೈದ ಘಟನೆ ಮೈಸೂರು ಜಿಲ್ಲೆಯ ಸರಗೂರು ಬಳಿಯ ಬಾಡಗ ಗ್ರಾಮದಲ್ಲಿ ನಡೆದಿದೆ.

ಸರಗೂರು ತಾಲೂಕಿನ ಬಾಡಗ ಗ್ರಾಮದ ನಿವಾಸಿ‌ ಹತ್ಯೆ ಮಾಡಿರುವ ಅಣ್ಣ ಮಹದೇವಸ್ವಾಮಿ. ತಮ್ಮ ಗುರುಸ್ವಾಮಿ (30) ಕೊಲೆಯಾದಾತ. 

ಬಾಡಗ ಗ್ರಾಮದ ಮಹಂತ ದೇವರು ಹಾಗೂ ರತ್ಮಮ್ಮ ದಂಪತಿಯ ಮೂರನೇ ಮಗನಾಗಿರುವ ಗುರುಸ್ವಾಮಿ ಅಣ್ಣ ಮಹದೇವಸ್ವಾಮಿ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಅಣ್ಣ ಮಹದೇವಸ್ವಾಮಿಗೂ ತಮ್ಮ ಗುರುಸ್ವಾಮಿಗೂ ಆಗಾಗ ಜಗಳವಾಗುತ್ತಿತ್ತು. ಹೆಂಡತಿಯೊಂದಿಗಿನ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಮಹದೇವಸ್ವಾಮಿ ತಮ್ಮನನ್ನು ಕೊಲೆ ಮಾಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಗುರುಸ್ವಾಮಿ ಎಂದಿನಂತೆ ಬೆಳಗ್ಗೆ ಹತ್ತಿ ಬಿಡಿಸಲು ಕುಟುಂಬಸ್ಥರೊಂದಿಗೆ ಜಮೀನಿಗೆ ತೆರಳಿದ್ದ. ಸಂಜೆ 5 ಗಂಟೆ ಸುಮಾರಿಗೆ ಕುಟುಂಬಸ್ಥರು ಮನೆಗೆ ಹಿಂತಿರುಗಿದಾಗ ತಮ್ಮ ಒಬ್ಬನೇ ಜಮೀನಿನಲ್ಲಿರುವುದನ್ನು ಖಚಿತ ಪಡಿಸಿಕೊಂಡು ಅಣ್ಣ ಮಹಾದೇವ ಸ್ವಾಮಿ ಮತ್ತೆ ಜಗಳ ತೆಗೆದಿದ್ದಾನೆ. ಇಬ್ಬರ ನಡುವೆ ವಾಗ್ವಾದ ಜೋರಾಗಿ ಬೆಳೆದಿದ್ದು, ಅಣ್ಣ ಏಕಾಏಕಿ ತಮ್ಮನ ಕಣ್ಣಿಗೆ ಖಾರದಪುಡಿ ಹಾಕಿ ಕುತ್ತಿಗೆಗೆ ಟವಲ್‍ನಿಂದ ಬಿಗಿದು ಹತ್ಯೆ ಮಾಡಿದ್ದಾನೆ.

ರಾತ್ರಿಯಾದರೂ ಮನೆಗೆ ಬಾರದ ಗುರುಸ್ವಾಮಿಯನ್ನು ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಡುವ ನಾಟಕವಾಡಿದ್ದಾನೆ ಅಣ್ಣ ಮಹಾದೇವ ಸ್ವಾಮಿ. ತಮ್ಮನ ಮೃತದೇಹ ಪತ್ತೆಯಾದಾಗ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸರಗೂರು ಠಾಣೆಯಲ್ಲಿ ದೂರು ಸಹ ದಾಖಲು ಮಾಡಿದ್ದಾನೆ.

ಪ್ರಕರಣದ ತನಿಖೆ ಆರಂಭಿಸಿದ ಸರಗೂರು ಠಾಣಾ ಪೊಲೀಸರು ವೃತ್ತ ನಿರೀಕ್ಷಕ ಆನಂದ್ ಹಾಗೂ ಪಿಎಸ್‍ಐ ಶ್ರವಣ ದಾಸ ರೆಡ್ಡಿ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಅಣ್ಣ ಮಹದೇವಸ್ವಾಮಿಯ ಮೇಲೆ ಅನುಮಾನ ದಟ್ಟವಾಗಿ ಹೋಗಿದೆ. ಆತನನ್ನೇ ಪೊಲೀಸ್ ಭಾಷೆಯಲ್ಲಿ‌ ವಿಚಾರಣೆಗೆ ಮಾಡಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತಕ್ಷಣ ಮಹದೇವಸ್ವಾಮಿಯನ್ನು ಬಂಧಿಸಿರುವ ಪೊಲೀಸರು‌ ಆರೋಪಿಯನ್ನು ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದಾರೆ.