ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನವನ್ನು ದೇಶಾದ್ಯಂತ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ವಿಭಿನ್ನವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಕೂಡ ಪ್ರಧಾನಿ ಮೋದಿ ಹುಟ್ಟುಹಬ್ಬ ಟ್ರೆಂಡಿಂಗ್‌ನಲ್ಲಿದೆ. ಆದರೆ, ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗಿಂತ ಉದ್ಯೋಗ ಕೋರಿಕೊಂಡವರ ಸಂಖ್ಯೆಯೇ ಹೆಚ್ಚಾಗಿ ಟ್ವಿಟ್ಟರ್‌ನಲ್ಲಿ ಕಾಣಿಸಿಕೊಂಡಿದೆ.
ಮೋದಿ ಹುಟ್ಟುಹಬ್ಬದಂದು ಟ್ವಿಟ್ಟರ್‌ನಲ್ಲಿ 'ರಾಷ್ಟ್ರೀಯ ಬೇರೋಜ್ ಗಾರ್ ದಿವಸ್', 'ನ್ಯಾಷನಲ್ ಅನ್ ಎಂಪ್ಲಾಯ್ಮೆಂಟ್ ಡೇ', 'ಮೋದಿ ರೋಜ್ ಗಾರ್ ದೋ' ಎಂಬ ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ.
ಶುಕ್ರವಾರ ಮಧ್ಯಾಹ್ನ 1.00 ಗಂಟೆಯವರೆಗೆ ಟ್ವೀಟ್ ಮಾಡಿದ ಅಂಕಿ ಅಂಶಗಳ ಪೈಕಿ ಹ್ಯಾಪಿ ಬರ್ತ್ ಡೇ ಮೋದಿ ಜೀ ಎಂಬ ಹ್ಯಾಷ್ ಟ್ಯಾಗ್ ಬಳಸಿ 3.92 ಲಕ್ಷ ಮಂದಿ ಟ್ವೀಟ್ ಮಾಡಿದ್ದಾರೆ.
ಆದರೆ ಉದ್ಯೋಗ ಕೇಳಿ ವಿವಿಧ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದವರ ಸಂಖ್ಯೆ ಬರೋಬ್ಬರಿ 23.51 ಲಕ್ಷಕ್ಕೂ ಅಧಿಕವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದವರ ಸಂಖ್ಯೆಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚು ಎಂದು ಈ ಟ್ವೀಟ್‌ಗಳ ಆಧಾರದಲ್ಲಿ ವಿಪಕ್ಷಗಳು ಟೀಕಿಸಿವೆ.
ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಣೆಯನ್ನು ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಇದೇ ವೇಳೆ, ಇನ್ನೊಂದೆಡೆಯಲ್ಲಿ ಈ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ವಿವಿಧ ಪಕ್ಷ ಸಂಘಟನೆಗಳು ದೇಶಾದ್ಯಂತ ಆಚರಿಸಿದೆ. ಟ್ವಿಟ್ಟರ್ ನಲ್ಲೂ ಇದು ಪ್ರತಿಫಲಿಸಿದೆ.
