Mangaluru: ಶಿಕ್ಷಕಿಗೆ ಗಿಫ್ಟ್ ನೀಡುವೆನೆಂದು ಬಂದ‌ ಆಗಂತುಕನಿಂದ ಮೂವರು ಮಹಿಳೆಯರ ಮೇಲೆ ತಲವಾರು ದಾಳಿ: ಸಿಕ್ಕಿಬಿದ್ದ ಆರೋಪಿ



ಮಂಗಳೂರು : ಶಿಕ್ಷಕಿಗೆ ಗಿಫ್ಟ್ ನೀಡಲೆಂದು ನಗರದ ಜೈಲು ರಸ್ತೆಯಲ್ಲಿರುವ ಡಯೆಟ್ ಶಿಕ್ಷಣ ಸಂಸ್ಥೆಯೊಳಗೆ ಬಂದ ಆಗಂತುಕನೋರ್ವನು ಅಲ್ಲಿನ ಮೂವರು ಮಹಿಳಾ ಸಿಬ್ಬಂದಿಗೆ ತಲವಾರು ದಾಳಿ ನಡೆಸಿರುವ ಘಟನೆ ನಡೆದಿದೆ.






ಇಂದು ಮಧ್ಯಾಹ್ನ 12.30-1 ಗಂಟೆ ಸುಮಾರಿಗೆ ಈ ಆಗಂತುಕ ಒಳ ಬಂದಿದ್ದಾನೆ‌. DIET(District Institute Of education & Training) ಕ್ಯಾಂಪಸ್ ನೊಳಗೆ ಈ ಆಗಂತುಕ ಬಂದಿದ್ದಾನೆ. ಬಂದವನು ಅಲ್ಲಿ ಯಾವುದೋ ಹೆಸರು ಹೇಳಿ ಆ ಶಿಕ್ಷಕಿಯಿದ್ದಾರೆಯೇ ಎಂದು ವಿಚಾರಿಸಿದ್ದಾನೆ. ಆಕೆಗೆ ತಾನು ಗಿಫ್ಟ್ ಒಂದನ್ನು ನೀಡಬೇಕೆಂದು ಹೇಳಿದ್ದಾನೆ. ಆದರೆ ಅಲ್ಲಿ ಯಾರಿಗೂ ಆತ ಕೇಳಿರುವ ಶಿಕ್ಷಕಿ ಇರುವ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ‌‌.




ಅಷ್ಟು ಹೇಳುತ್ತಿದ್ದಂತೆ ಆತ ತನ್ನಲ್ಲಿದ್ದ ತಲವಾರನ್ನು ಬೀಸಿದ್ದಾನೆ‌. ಈ ಸಂದರ್ಭ ಅಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈತನ ದಾಳಿಯಿಂದ ಬೆದರಿ ಅವರು ಕಿರುಚಾಡಿದ್ದಾರೆ. ಆಗ ಪಕ್ಕದಲ್ಲಿಯೇ ಇದ್ದ ಜೈಲು ಸಿಬ್ಬಂದಿ, ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದಿದ್ದಾರೆ. ತಕ್ಷಣ ತಲವಾರು ದಾಳಿಯಿಂದ ಗಾಯಗೊಂಡ ಮಹಿಳೆಯರನ್ನು ನಗರದ ಫಾದರ್ ಮುಲ್ಲರ್ ಆಸ್ಪತ್ರೆ, ವಿನಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಹಣೆ, ಬೆನ್ನು, ಕೈ, ತಲೆಗಳಿಗೆ ಗಾಯಗೊಂಡಿದ್ದಾರೆ.


ತಲವಾರು ದಾಳಿ ಮಾಡಿದವನು 30-35 ವರ್ಷ ವಯಸ್ಸಿನವನಾಗಿದ್ದಾನೆ‌. ಈತ ಇದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿತವನು ಎಂದು ಹೇಳುತ್ತಿದ್ದಾನೆಯೇ ಹೊರತು ಬೇರೇನನ್ನು ಬಾಯಿ ಬಿಟ್ಟಿಲ್ಲ. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌‌. ಈ ಬಗ್ಗೆ ತನಿಖೆಯಿಂದಷ್ಟೇ ಆರೋಪಿ ಕೃತ್ಯ ಏಕೆ ಎಸಗಿದ್ದಾನೆಂದು ತಿಳಿದು ಬರಬೇಕಾಗಿದೆ.




ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.