
ಗೂಗಲ್ ನಲ್ಲಿ ಯಾವುದೇ ಕಾರಣಕ್ಕೂ ಕಸ್ಟಮರ್ ಕೇರ್ ಸಂಖ್ಯೆಯನ್ನು ಸರ್ಚ್ ಮಾಡಿದರೆ ನೀವು ಏಮಾರುವುದಂತೂ ಸತ್ಯ!
9/23/2021 10:35:00 PM
ಹೈದರಾಬಾದ್: ಆಧುನಿಕ ಯುಗದಲ್ಲಿ ತಾಂತ್ರಿಕತೆ ಎಷ್ಟೊಂದು ಮುಂದುವರಿದಿದೆ ಎಂದರೆ ಜನರು ತಮ್ಮ ಯಾವುದೇ ಪ್ರಶ್ನೆಗೆ, ಸಮಸ್ಯೆಗೆ ಉತ್ತರ ಕಂಡಕೊಳ್ಳಲು ಮೊದಲು ಗೂಗಲ್ ಸರ್ಚ್ ಮಾಡುತ್ತಾರೆ. ಈ ಮೂಲಕ ಜನರು ಪ್ರತಿಯೊಂದಕ್ಕೂ ಅಂತರ್ಜಾಲಕ್ಕೆ ಅಂಟಿಕೊಂಡು ಅಂಗೈನಲ್ಲಿ ಇಡೀ ಜಗತ್ತು ನೋಡುತ್ತಾರೆ. ಆದರೆ, ಈ ಅಂತರ್ಜಾಲವು ಎಷ್ಟು ಉಪಕಾರಿಯೋ? ಸ್ವಲ್ಪ ಯಾಮಾರಿದರೂ ಅಷ್ಟೇ ಅಪಾಯಕಾರಿ ಎಂಬುದಂತೂ ಸತ್ಯ.
ಇಂದು ಎಲ್ಲೆಡೆ ವಂಚಕರ ಜಾಲ ಕಂಡು ಬರುತ್ತಿದ್ದು, ಸ್ವಲ್ಪ ಯಾಮಾರಿದರೂ ಈ ಜಾಲಕ್ಕೆ ಸುಲಭವಾಗಿ ತುತ್ತಾಗುತ್ತೇವೆ. ಹೀಗಾಗಿ ಗೂಗಲ್ ಸರ್ಚ್ ಮಾಡುವಾಗ ಎರೆಡೆರಡು ಬಾರಿ ಆಲೋಚನೆ ಮಾಡುವುದು ಒಳಿತು. ಯಾರೂ ಕೂಡ ಏನೇ ಆದರೂ ಗೂಗಲ್ನಲ್ಲಿ ಯಾವುದೇ ಕಾರಣಕ್ಕೂ ಕಸ್ಟಮರ್ ಕೇರ್ ನಂಬರ್ ಹುಡುಕಬೇಡಿ. ಏಕೆಂದರೆ ಕಸ್ಟಮರ್ ಕೇರ್ ನಂಬರ್ ಹುಡುಕಲು ಮುಂದಾಗಿದ್ದೇವೆ ಎಂದರೆ ಸೈಬರ್ ವಂಚಕರ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದರ್ಥ. ಕಸ್ಟಮರ್ ಕೇರ್ ನಂಬರ್ ಹುಡುಕಾಟ ನಡೆಸಲು ಹೋಗಿ ವಂಚಕರ ಜಾಲಕ್ಕೆ ಸಿಲುಕಿರುವ 1,395 ಪ್ರಕರಣಗಳು ಹೈದರಾಬಾದ್ನಲ್ಲಿ ನಡೆದಿವೆ. ಇದರಲ್ಲಿ 189 ಪ್ರಕರಣಗಳಲ್ಲಿ ಸಂತ್ರಸ್ತರು 1.01 ಕೋಟಿ ರೂ. ನಗದು ಕಳೆದುಕೊಂಡಿದ್ದಾರೆ.
ಬ್ಯಾಂಕ್, ಟೆಲಿಕಾಂ ಕಂಪೆನಿಗಳು, ಫುಡ್ ಡೆಲಿವರಿ ಆ್ಯಪ್ಸ್, ಟ್ರ್ಯಾವೆಲ್ಸ್, ಕೊರಿಯರ್, ಗೂಗಲರ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಹಲವಾರು ಸಂಸ್ಥೆಗಳ ಕಸ್ಟಮರ್ ಕೇರ್ ನಂಬರ್ ಗೂಗಲ್ ನಲ್ಲಿ ಹುಡುಕಾಟ ನಡೆಸಲು ಹೋಗಿ ಅನೇಕರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಇದಲ್ಲದೆ ಸೈಬರ್ ಕಳ್ಳರು ಗೂಗಲ್ ಆ್ಯಡ್ಸ್ ಮೂಲಕ ನಕಲಿ ಮಾಹಿತಿಯನ್ನು ಅಪ್ಲೋಡ್ ಮಾಡಿ ವಂಚನೆ ಮಾಡಲು ಕಾಯುತ್ತಿರುತ್ತಾರೆ. ಯಾರಾದರೂ ಯಾವುದಾದರೂ ಸಂಸ್ಥೆಯ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದಾಗ ತಮ್ಮ ನಂಬರ್ ಮೊದಲು ಬರುವಂತೆ ಸೈಬರ್ ವಂಚಕರು ಗೂಗಲ್ ಸರ್ಚ್ ಇಂಜಿನ್ನಲ್ಲಿ ಸೆಟ್ ಮಾಡಿರುತ್ತಾರೆ. ಆದ್ದರಿಂದ ಆನ್ಲೈನ್ ಮೂಲಕ ಕಸ್ಟಮರ್ ಕೇರ್ ಸಂಖ್ಯೆ ಹುಡುಕಾಟ ಮಾಡುವ ಗ್ರಾಹಕರು ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವುದಂತೂ ಖಂಡಿತಾ.
ಒಂದು ವೇಳೆ ಕಸ್ಟಮರ್ ಕೇರ್ನವರು ನಿಮ್ಮ ಬ್ಯಾಂಕ್ ಮಾಹಿತಿ, ಎಟಿಎಂ ಪಿನ್, ಒಟಿಪಿ ಸಂಖ್ಯೆ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿ ಕೇಳಿದ್ದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು. ಏಕೆಂದರೆ ಯಾವುದೇ ಬ್ಯಾಂಕ್ಗಳು ಅಥವಾ ಸಂಸ್ಥೆಗಳು ನಿಮ್ಮ ಬ್ಯಾಂಕ್ ಮಾಹಿತಿಯನ್ನಾಗಲಿ ಅಥವಾ ಎಟಿಎಂ ನಂಬರ್ ಆಗಲಿ ಕೇಳುವುದಿಲ್ಲ. ಆದ್ದರಿಂದ ವಂಚನೆಯಿಂದ ಪಾರಾಗಲು ಮೈಯೆಲ್ಲಾ ಎಚ್ಚರದಿಂದ ವ್ಯವಹರಿಸುವುದು ಒಳಿತು.