ಮಾದಕದ್ರವ್ಯ ಪ್ರಕರಣದ ಅಪರಾಧಿಗಳಿರುವ ಕಾರಾಗೃಹಕ್ಕೆ ಬೆಂಕಿ: ಸುಟ್ಟು ಕರಕಲಾದ ಕೈದಿಗಳು

ಜಕಾರ್ತಾ: ಇಂಡೋನೇಷ್ಯಾ ದೇಶದ ಜಕಾರ್ತಾದ ಬಾಂಟೆನ್ ಪ್ರಾಂತ್ಯದ ಕಾರಾಗೃಹದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕೈದಿಗಳು ಸೇರಿದಂತೆ ಸುಮಾರು 41 ಮಂದಿ ಸುಟ್ಟು ಕರಕಲಾಗಿದ್ದು, 40ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗೊಂಡ  ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಪೋರ್ಚುಗಲ್‌ ಮತ್ತು ದಕ್ಷಿಣ ಆಫ್ರಿಕಾದ ಕೈದಿಗಳೂ ಇದ್ದರು ಎನ್ನಲಾಗಿದೆ.

ಡ್ರಗ್ಸ್ ಪ್ರಕರಣದ ಅಪರಾಧಿಗಳಿಗಾಗಿ ಇರುವ ಜೈಲಿನ ಬ್ಲಾಕ್ ಸಿ ಯಲ್ಲಿ ಈ ದುರಂತ ಸಂಭವಿಸಿದೆ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ಮಾಹಿತಿ ನೀಡಿದ್ದಾರೆ. ಸುಮಾರು 1,225 ಕೈದಿಗಳನ್ನು ಇರಿಸಬೇಕಾದ  ಈ ಕಾರಾಗೃಹದಲ್ಲಿ 2 ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಅಗ್ನಿ ದುರಂತ ಸಂಭವಿಸಿರುವ ಸಿ ಬ್ಲಾಕ್‌ನಲ್ಲಿ 122 ಅಪರಾಧಿಗಳಿದ್ದರು. ಅಗ್ನಿ ನಿಯಂತ್ರಣ ಮಾಡಲು ಸಾಕಷ್ಟು ಪೋಲಿಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ರಿಕಾ ವಿವರಿಸಿದ್ದಾರೆ.

ಗಲಭೆಗಳು ಅಧಿಕವಾಗಿರುವ ಇಂಡೋನೇಷ್ಯಾದ ಈ ಜೈಲಿನಲ್ಲಿ ಸುವ್ಯವಸ್ಥೆ ಇಲ್ಲದೆ, ಹೆಚ್ಚಿನ ಕೈದಿಗಳಿರುವುದು ಸಮಸ್ಯೆಯಾಗಿದೆ ಎನ್ನಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಸಂಭವಿಸಿರಬಹುದು ಎನ್ನಲಾಗುತ್ತಿದ್ದರೂ ನಿಖರ ಇನ್ನಷ್ಟೇ ಕಾರಣ ತಿಳಿಯಬೇಕಿದೆ.