ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ವ್ಯಕ್ತಿಗೆ ಹಲ್ಲೆ: ಇಬ್ಬರು ದುಷ್ಕರ್ಮಿಗಳು ವಶಕ್ಕೆ

ಬೆಂಗಳೂರು: ಸಹದ್ಯೋಗಿ ಮುಸ್ಲಿಂ ಮಹಿಳೆಯೋರ್ವರಿಗೆ ಬೈಕ್​ನಲ್ಲಿ ಡ್ರಾಪ್​ ನೀಡುತ್ತಿದ್ದ ಹಿಂದೂ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಇಬ್ಬರು ದುಷ್ಕರ್ಮಿಗಳನ್ನು ನಗರದ ಎಸ್​.ಜಿ.ಪಾಳ್ಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ಡೈರಿ ಸರ್ಕಲ್​ನಲ್ಲಿ ಈ ಘಟನೆ ನಡೆದಿದೆ. ಬೈಕನ್ನು ತಡೆದು ನಿಲ್ಲಿಸಿರುವ ದುಷ್ಕರ್ಮಿಗಳು ವ್ಯಕ್ತಿಗೆ ಹಲ್ಲೆ ನಡೆಸಿದ್ದು, ಮಹಿಳೆಗೂ ದಬಾಯಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗುತ್ತಿರುವ ಬೆನ್ನಲ್ಲೇ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬ್ಯಾಂಕ್​ವೊಂದರ ನೌಕರರಾಗಿದ್ದ ಮಹೇಶ್​ ತಮ್ಮ ಸಹದ್ಯೋಗಿ ಮುಸ್ಲಿಂ ಮಹಿಳೆಯೋರ್ವರಿಗೆ ಬೈಕ್​ನಲ್ಲಿ ಮನೆಗೆ ಡ್ರಾಪ್ ಮಾಡುತ್ತಿದ್ದರು. ಈ ವೇಳೆ ಹಿಂಬಾಲಿಸಿರುವ ದುಷ್ಕರ್ಮಿಗಳು ಬೈಕ್ ತಡೆದು ನಿಲ್ಲಿಸಿ ರಸ್ತೆ ಮಧ್ಯೆಯೇ ಹಲ್ಲೆ ಮಾಡಿದ್ದಾರೆ. ಅಲ್ಲದೆ, "ಇನ್ನೊಂದು ಬಾರಿ ಬುರ್ಖಾ ಹಾಕಿಕೊಂಡಿರುವವರನ್ನು ಕೂರಿಸಿಕೊಂಡು ಹೋದ್ರೆ ಅಷ್ಟೇ" ಎಂದು ಬೆದರಿಕೆ ಒಡ್ಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. 

ಇದೇ ವೇಳೆ ಮಹಿಳೆಯನ್ನೂ ದಬಾಯಿಸಿರುವ​ ದುಷ್ಕರ್ಮಿಗಳು, "ನಿನಗೆ ನಾಚಿಕೆಯಾಗಲ್ವಾ.. ಈ ಜಗತ್ತಿಲ್ಲಿ ಏನು ಆಗ್ತಿದೆ ಗೊತ್ತಾಗೋಲ್ವಾ? ಅನ್ಯಕೋಮಿನವರೊಂದಿಗೆ ಹೀಗೆ ಕುಳಿತುಕೊಂಡು ಹೋಗ್ತಿದ್ದೀಯ" ಎಂದು ಗದರಿಸಿ, ಬೈಕ್​ನಿಂದ ಇಳಿಸಿ ಆಟೋದಲ್ಲಿ ಹೋಗು ಎಂದು ಕಳುಹಿಸಿದ್ದರು. 

ಅಲ್ಲದೆ ಮಹಿಳೆಯ ಗಂಡನ ಮೊಬೈಲ್ ಫೋನ್ ಸಂಖ್ಯೆ ಪಡೆದು  ಆಕೆಯ ಗಂಡನಿಗೂ ಫೋನ್​ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಬೊಮ್ಮಾಯಿಯವರು ಟ್ವೀಟ್​ ಮಾಡಿದ್ದು, “ಪ್ರಕರಣದಲ್ಲಿ ಪೊಲೀಸರು ಚುರುಕಿನಿಂದ ಕಾರ್ಯಪ್ರವೃತ್ತರಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ. ಪ್ರಕರಣ ದಾಖಲಿಸಿದ್ದು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ನನ್ನ ಸರಕಾರ ಇಂಥ ಪ್ರಕರಣಗಳಲ್ಲಿ ಉಕ್ಕಿನ ಹಸ್ತದಿಂದ ಕ್ರಮ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu