ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಕಾರಿಂಜ ದೇವಸ್ಥಾನಕ್ಕೆ ಪ್ರವಾಸ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆದಿದೆ. ವಿದ್ಯಾರ್ಥಿಗಳ ಗುಂಪಿನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ತಮ್ಮ ಮೇಲಿನ ದೌರ್ಜನ್ಯ ವಿರುದ್ಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾದ ಐವರು ಯುವಕರ ಮೇಲೆ ದೂರು ದಾಖಲಿಸಿದ್ದಾರೆ.
ಮಂಗಳೂರಿನ ಹೊರವಲಯದ ಖಾಸಗಿ ಮೆಡಿಕಲ್ ಕಾಲೇಜ್‌ನಲ್ಲಿ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ಕಲಿಯುತ್ತಿರುವ ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳು ಕಾರಿಂಜೇಶ್ವರ ದೇವಸ್ಥಾನದ ಪ್ರವಾಸಕ್ಕೆ ತೆರಳಿದ್ದರು.
ದೇವಸ್ಥಾನದ ಪರಿಸರದಲ್ಲಿ ಸೆಲ್ಫಿ ಫೋಟೋ ಕ್ಲಿಕ್ ಮಾಡಿಕೊಂಡು ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಐವರು ಗೂಂಡಾಗಳು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಲ್ಲದೆ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರವಾಸಿ ವಿದ್ಯಾರ್ಥಿಗಳ ಗುಂಪಿನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿದ್ದರು. ಸಂಘ ಪರಿವಾರದ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ್ದರು ಎಂದು ಹೇಳಲಾಗಿದೆ.
ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಪುಂಜಾಲಕಟ್ಟೆ ಪೊಲೀಸರು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಠಾಣೆಗೆ ಕರೆದು ತಂದರು. ಬಳಿಕ, ವಿದ್ಯಾರ್ಥಿನಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದು 5 ಮಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
