ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದ ಅಮ್ಮುಂಜೆ ಮೋಹನ್ ಕುಮಾರ್ ರಂಗಸ್ಥಳದಲ್ಲೇ ಕುಸಿದುಬಿದ್ದ ಆತಂಕಕಾರಿ ಘಟನೆ ಮೂಡಬಿದಿರೆಯ ಅಲಂಗಾರಿನಲ್ಲಿ ನಡೆದಿದೆ.
ಸುಮಾರು 15 ನಿಮಿಷಗಳ ಕಾಲ ವಿಶ್ರಾಂತಿ ಬಳಿಕ ಚೇತರಿಸಿಕೊಂಡ ಅವರು, ತಾನು ಈಗ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಅಲಂಗಾರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕರ್ಣ ಪರ್ವ ಪ್ರಸಂಗದಲ್ಲಿ ಈ ಘಟನೆ ನಡೆದಿದೆ.
ಅತೀವ ಬಳಲಿಕೆ ಮತ್ತು ತಲೆ ಸುತ್ತು ಬಂದ ಹಿನ್ನೆಲೆಯಲ್ಲಿ ರಂಗಸ್ಥಳದಲ್ಲೇ ಅಮ್ಮುಂಜೆ ಅವರು ಕುಸಿದುಬಿದ್ದಿದ್ದಾರೆ ಎಂದು ಮೇಳದ ಕಲಾವಿದರು ಹೇಳಿದ್ದಾರೆ.
ಘಟನೆಯಿಂದ ಸುಮಾರು 15 ನಿಮಿಷಗಳ ಕಾಲ ಪ್ರಸಂಗದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.
ಕಲಾವಿದ ಅಮ್ಮುಂಜೆ ಅವರು ಚೇತರಿಸಿಕೊಂಡ ಬಳಿಕ ಪ್ರಸಂಗವನ್ನು ಮುಂದುವರಿಸಲಾಯಿತು.
ಐದು ತಿಂಗಳ ಕಾಲ ಬಣ್ಣ ಹಚ್ಚಿ ರಂಗಸ್ಥಳದಲ್ಲಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ತಲೆ ಸುತ್ತು ಬಂದು ಬಿದ್ದು ಬಿಟ್ಟಿದ್ದೇನೆ ತನಗೆ ಯಾವುದೇ ಆರೋಗ್ಯ ಸಮಸ್ಯೆಗಳಾಗಿಲ್ಲ. ಆರೋಗ್ಯದಿಂದ ಇದ್ದೇನೆ ಎಂದು ಅವರು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
