ಬೆಂಗಳೂರು: ಕೋವಿಡ್ 19 ಎರಡನೇ ಅಲೆಯ ಸೋಂಕು ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಸ್ತಬ್ದವಾಗಿದ್ದ ಕೋರ್ಟ್ ಕಲಾಪಗಳು ನಿಧಾನಕ್ಕೆ ಹಳಿಗೆ ಮರಳುವ ಸೂಚನೆ ನೀಡಿದೆ.
ರಾಜ್ಯ ಹೈಕೋರ್ಟ್ ಶುಕ್ರವಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಮುಂದಿನ ಸೋಮವಾರದಿಂದ (ಜೂನ್ 28ರಿಂದ) ಮೈಸೂರು ಹೊರತುಪಡಿಸಿ ರಾಜ್ಯದ 29 ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಅನುಸರಿಸಬೇಕಾದ ಕಾರ್ಯಸೂಚಿ ಬಗ್ಗೆ ನಿರ್ದೇಶನ ಹೊರಡಿಸಿದೆ.
ಈ ಮಾರ್ಗಸೂಚಿ ಪ್ರಕಾರ, ಒಂದು ನ್ಯಾಯಾಲಯದಲ್ಲಿ ಪ್ರತಿ ದಿನ 30 ಪ್ರಕರಣಗಳ ವಿಚಾರಣೆ ಆದ್ಯತೆ ಮೇರೆಗೆ ನಡೆಯಲಿದೆ. ಬೆಳಿಗ್ಗಿನ ಅಧಿವೇಶನದಲ್ಲಿ 15 ಮತ್ತು ಅಪರಾಹ್ನದ ಅಧಿವೇಶನದಲ್ಲಿ 15 ಪ್ರಕರಣಗಳ ನ್ಯಾಯ ವಿಚಾರಣೆ ನಡೆಯಲಿದೆ.
ವಕೀಲರ ದಟ್ಟಣೆಯನ್ನು ಕಡಿಮೆ ಮಾಡಲು ಈ ಕೇಸ್ ಮಿತಿ ಹಾಕಲಾಗಿದೆ ಎಂದು ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿ ನಿರ್ದೇಶನದಲ್ಲಿ ಹೇಳಲಾಗಿದೆ.
ನ್ಯಾಯಾಧೀಶರ ಮುಂದೆ ಕರೆಯಲಾಗುವ 30 ಕೇಸುಗಳ ಮಧ್ಯಂತರ ಅರ್ಜಿಗಳ ವಾದ-ವಿಚಾರಣೆ, ಅಂತಿಮ ವಾದ ಮಂಡನೆ, ಸಾಕ್ಷ್ಯ ವಿಚಾರಣೆಗಳನ್ನು ಆದ್ಯತೆ ಮೇರೆಗೆ ಮಾಡುವಂತೆ ಅಧೀನ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಪರಂತು, ಜಾಮೀನು ಕೋರಿದ ಪ್ರಕರಣಗಳಿಗೆ 30 ಕೇಸ್ ಮಿತಿ ಅನ್ವಯಿಸುವುದಿಲ್ಲ.
ವೈಯಕ್ತಿಕವಾಗಿ ಕೇಸು ನಡೆಸುವವರು ಹಾಗೂ ಯಾವುದೇ ಕಕ್ಷಿದಾರರ ನ್ಯಾಯಾಲಯ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಕೇಸು ಫೈಲ್ ಮಾಡಲು ಬಯಸುವ ವೈಯಕ್ತಿಕ ಪಕ್ಷಕಾರರು ಆ ಉದ್ದೇಶಕ್ಕೆ ಮಾತ್ರ ನ್ಯಾಯಾಲಯ ಆವರಣ ಪ್ರವೇಶಿಸಬಹುದು. ಆದರೆ, ಈ ನಿರ್ಬಂಧ ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯಕ್ಕೆ ಹಾಜರು ಆಗುವವರಿಗೆ ಅನ್ವಯಿಸುವುದಿಲ್ಲ.
ನ್ಯಾಯಾಲಯದಿಂದ ನಿರ್ದಿಷ್ಟ ಆದೇಶದ ಹೊರತು, ಜೈಲಿನಲ್ಲಿ ವಿಚಾರಣಾಧೀನ ಖೈದಿಗಳ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ವೀಡಿಯೋ ಕಾನ್ಪರೆನ್ಸ್ ಮೂಲಕ 313 ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗಿದೆ.
ಆದರೆ, ವಕೀಲರ ಸಂಘದ ಕಚೇರಿಯನ್ನು ಮುಂದಿನ ಆದೇಶದ ವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಅದಕ್ಕೆ ಬದಲಾಗಿ, ಸ್ಟ್ಯಾಂಪ್ ಮಾರಾಟಕ್ಕೆ ಅನುವು ಮಾಡಿಕೊಡಲು ಪ್ರತ್ಯೇಕ ಸಣ್ಣ ಕೌಂಟರ್ ತೆರೆಯಲು ಅವಕಾಶ ನೀಡಲಾಗಿದೆ.
ಈ ಮೇಲಿನ ಮಾರ್ಪಾಟುಗಳನ್ನು ಹೊರತುಪಡಿಸಿ ಉಳಿದಂತೆ ದಿನಾಂಕ 21-06-2021ರಂದು ಹೈಕೋರ್ಟ್ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.
ಕೋರ್ಟ್ ಸಂಕೀರ್ಣ ಮತ್ತು ನ್ಯಾಯಾಲಯ ಆವರಣದಲ್ಲಿ ಕಾಫಿ/ಟಿ ಮತ್ತು ಬಿಸ್ಕತ್ತು ಹೊರತುಪಡಿಸಿ ಯಾವುದೇ ರೀತಿಯ ಕ್ಯಾಂಟೀನ್ ನಡೆಸಲು ಅವಕಾಶ ನಿರಾಕರಿಸಲಾಗಿದೆ.

