MRPL appointment - ಎಂಆರ್‌ಪಿಎಲ್ ನೇಮಕಾತಿಯಲ್ಲಿ ಅಕ್ರಮ, ನಾಟಕ ಸಾಕು, ಸಂಸದ ನಳಿನ್ ರಾಜೀನಾಮೆ ನೀಡಲಿ: ಮುನೀರ್
ದೇಶದ ಪ್ರತಿಷ್ಠಿತ ಕಂಪೆನಿಗಳಲ್ಲಿ ಒಂದಾದ ಒಎನ್‌ಜಿಸಿಯ ಅಧೀನ ಸಂಸ್ಥೆಯಾದ ಸರಕಾರಿ ಸ್ವಾಮ್ಯದ ಎಂಆರ್‌ಪಿಎಲ್ ಉದ್ಯೋಗದಲ್ಲಿ ಭಾರೀ ವಂಚನೆ, ಮೋಸ ನಡೆದಿದೆ. ಕನ್ನಡಿಗರ ಕಣ್ಣಿಗೆ ಎಣ್ಣೆ ಹಾಕಿ ಉತ್ತರ ಭಾರತೀಯರ ಕಣ್ಣಿಗೆ ಬೆಣ್ಣೆ ಸವರಲಾಗಿದೆ. ಆದರೂ ಕರಾವಳಿಯ ಸಂಸದರು ಕೈಕಟ್ಟಿ ಕುಳಿತಿದ್ದಾರೆ. ಸ್ಥಳೀಯ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
224 ಉದ್ಯೋಗದ ನೇಮಕಾತಿಯಲ್ಲಿ ಅವಿಭಜಿತ ಜಿಲ್ಲೆ ಸಹಿತ ಕನ್ನಡ ನಾಡಿಗೆ ಬಹುದೊಡ್ಡ ವಂಚನೆ ಎಸಗಲಾಗಿದೆ. ಉತ್ತರ ಪ್ರದೇಶ, ಬಿಹಾರದಿಂದಲೆ ಕನಿಷ್ಟ ನೂರು ಜನ ಅವಕಾಶ ಪಡೆದಿದ್ದು, ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲೆ ಬಹುದೊಡ್ಡ ಅಕ್ರಮ ನಡೆದಿದೆ ಎಂದು ಅವರು ಹೇಳಿದ್ದಾರೆ..
ಇಡೀ ನೇಮಕಾತಿ ತಕ್ಷಣ ಪ್ರಕ್ರಿಯೆ ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು, ಹಾಗೂ ಈ ಎಲ್ಲಾ ವೈಫಲ್ಯ, ವಂಚನೆಗಳಿಗೆ ಅವಳಿ ಜಿಲ್ಲೆಗಳ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಉಭಯ ಜಿಲ್ಲೆಗಳ ಶಾಸಕರೇ ನೇರ ಕಾರಣರಾಗಿದ್ದಾರೆ. ತಕ್ಷಣ ಇವರು ರಾಜೀನಾಮೆ ಸಲ್ಲಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಎಂಆರ್‌ಪಿಎಲ್ 224 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಡಿವೈಎಫ್ಐ ಪ್ರಬಲ ವಿರೋಧ ದಾಖಲಿಸಿತ್ತು. ಸ್ಥಳೀಯರಿಗೆ 80 ಶೇಕಡಾ ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಕ್ಕೊತ್ತಾಯ ಹಾಗೂ ಎಂಆರ್‌ಪಿಎಲ್ ಮುಂಭಾಗ ಸಾಮೂಹಿಕ ಧರಣಿಯನ್ನೂ ನಡೆಸಲಾಗಿತ್ತು ಎಂದು ಅವರು ನೆನಪಿಸಿದರು.
ಪ್ರತಿಭಟನೆಯ ಬಿಸಿಯಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣರು ಕಂಪೆನಿಗೆ ನೋಟೀಸು ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಪೆನಿ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದಿತ್ತು. ಸಂಸದರಾದ ನಳಿನ್ ಕುಮಾರ್ ಕಟೀಲ್ ಸಹಿತ ಯಾವೊಬ್ಬ ಶಾಸಕರೂ ಆಗ ಧ್ವನಿಗೂಡಿಸಿರಲಿಲ್ಲ ಎಂದು ಮುನೀರ್ ಆರೋಪಿಸಿದರು.
ಈಗ ಕೊರೋನ, ಲಾಕ್‌ಡೌನ್ ಗದ್ದಲಗಳ ಮಧ್ಯೆ ಕಂಪೆನಿ ತನ್ನ ಅಜೆಂಡಾ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡಕ್ಕೆ ಎರಡು, ಉಡುಪಿಗೆ ಎರಡು ಸಹಿತ ಇಡೀ ಕರ್ನಾಟಕಕ್ಕೆ ಕೇವಲ 13 ಸ್ಥಾನಗಳು ಮಾತ್ರ ದೊರಕಿದೆ. ಆದರೆ, ಇದೇ ಸಂದರ್ಭ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಒಟ್ಟು ನೂರು ಸ್ಥಾನಗಳು ದೊರಕಿವೆ.. ಇದರಲ್ಲಿ ಅಕ್ರಮದ ವಾಸನೆ ಕಂಡುಬರುತ್ತಿದೆ.
ದಕ್ಷಿಣ ಭಾರತದ ಇತರ ರಾಜ್ಯಗಳ ಅಭ್ಯರ್ಥಿಗಳೂ ಅತಿ ಕಡಿಮೆ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು ಉತ್ತರ ಭಾರತದ ರಾಜ್ಯಗಳ ಅಭ್ಯರ್ಥಿಗಳನ್ನೇ ಗುರುತಿಸಿ ಆಯ್ಕೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳ ಹಲವಾರು ಪ್ರತಿಭಾವಂತ ಯುವಜನರು ಅತ್ಯುತ್ತಮವಾಗಿ ಪರೀಕ್ಷೆ ಎದುರಿಸಿದ್ದರೂ ಅವರನ್ನು ಹೀನಾಯವಾಗಿ ಹೊರದಬ್ಬಲಾಗಿದೆ. ಈಗ ಆಯ್ಕೆಯಾಗಿರುವ ಉತ್ತರ ಭಾರತದ ಅಭ್ಯರ್ಥಿಗಳ ಸಾಮರ್ಥ್ಯದ ಕುರಿತೂ ಹಲವು ಅನುಮಾನಗಳು ವ್ಯಕ್ತವಾಗಿದೆ.
ಒಟ್ಟು ಇಡೀ ನೇಮಕಾತಿ ಪ್ರಕ್ತಿಯೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ, ಪಿತೂರಿ, ವಂಚನೆಯ ವಾಸನೆ ಹೊಡೆಯುತ್ತಿದೆ. ನೇಮಕಾತಿ ಅಧಿಕಾರಿ ಸಹಿತ ಕಂಪೆನಿಯ ಉನ್ನತ ಅಧಿಕಾರಿಗಳು, ಆಳುವ ಸರಕಾರದ ರಾಜಕಾರಣಿಗಳು ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ.
ಈಗಿನ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯರಿಗೆ 80 ಶೇಕಡಾ ಮೀಸಲಿನೊಂದಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಹಾಗೂ ನಡೆದಿರುವ ನೇಮಕಾತಿ ಪ್ರಕ್ರಿಯೆಯ ಹಗರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಡಿವೈಎಫ್ಐ ಒತ್ತಾಯಿಸುತ್ತದೆ. ಹಾಗೂ ಈ ಎಲ್ಲಾ ಅಕ್ರಮ, ಸ್ಥಳೀಯರಿಗೆ ಆಗಿರುವ ಅನ್ಯಾಯಗಳಿಗೆ ತುಳುನಾಡಿನ ಸಂಸದರು, ಶಾಸಕರು ನೇರ ಹೊಣೆಯಾಗಿದ್ದು ಅವರು ರಾಜಿನಾಮೆ ನೀಡಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.


