ಎಂಆರ್‌ಪಿಎಲ್‌ನ ಉದ್ಯೋಗದಲ್ಲಿ ಸ್ಥಳೀಯರು ಮತ್ತು ರಾಜ್ಯದ ಜನರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಜೂನ್ 5ರಂದು ಶನಿವಾರ ವರ್ಚುವಲ್ ಹಕ್ಕೊತ್ತಾಯ ಪ್ರತಿಭಟನೆ ನಡೆಯಲಿದೆ.
ಕರ್ನಾಟಕದ ಅರ್ಹ ಉದ್ಯೋಗಾಕಾಂಕ್ಷಿಗಳನ್ನು ಹೊರಗಿಟ್ಟು ಇಲ್ಲಿನ ನೆಲ-ಜಲಕ್ಕೆ ದ್ರೋಹ ಬಗೆದ ಎಂಆರ್‌ಪಿಎಲ್ ಕಂಪೆನಿಗೆ ಮತ್ತು ಇದಕ್ಕೆ ಬೆಂಬಲ ನೀಡಿ ಕಣ್ಣು ಮುಚ್ಚಿ ಕುಳಿತ ಸುಳ್ಳ ಜನಪ್ರತಿನಿಧಿಗಳ ವಿರುದ್ಧ ಮನೆ ಮನೆಗಳಲ್ಲಿ ಅಭಿಯಾನ, ಪೋಸ್ಟರ್ ಚಳವಳಿ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನಾಡಿನೆಲ್ಲೆಡೆ ಉದ್ಯೋಗ ವಂಚನೆ ಬಗ್ಗೆ ವ್ಯಾಪಕ ಚರ್ಚೆಯಾಗಿದೆ. ಜನಪ್ರತಿನಿಧಿಗಳ ಕರ್ತವ್ಯ ವಂಚನೆ, ಸುಳ್ಳತನ ಮತ್ತು ವೈಫಲ್ಯದ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ನಾವಿನ್ನು ಸುಮ್ಮನೆ ಕುಳಿತರೆ ಏನೂ ಆಗದು. ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸುವ ಕಾಲ ಬಂದಿದೆ. ಜೂನ್ 5ರಂದು ಮೊದಲ ಹಂತದ ಹಕ್ಕೊತ್ತಾಯ ಚಳವಳಿ ನಡೆಯಲಿದೆ ಎಂದು ಹೇಳಿದ್ಧಾರೆ.
ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿದ್ದೇವೆ ಎಂದು ಬರೀ ಬೊಗಳೆ ಬಿಟ್ಟ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೈ. ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಮತ್ತು ಉಮಾನಾಥ ಕೋಟ್ಯಾನ್ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು. ಇಲ್ಲಿನ ಯುವಜನರಿಗೆ ಎಂಆರ್‌ಪಿಎಲ್ ಉದ್ಯೋಗದಲ್ಲಿ ಸಿಂಹ ಪಾಲು ಸಿಗುವಂತೆ ಮಾಡಬೇಕು ಎಂಬುದು ಹಕ್ಕೊತ್ತಾಯ ಚಳವಳಿಯ ಪ್ರಧಾನ ಬೇಡಿಕೆ ಎಂದು ಅವರು ಹೇಳಿದ್ದಾರೆ.
ತುಳುನಾಡಿನ ಸಮಾನ ಮನಸ್ಕ ಸಂಘಟನೆಗಳು ಈ ಹಕ್ಕೊತ್ತಾಯ ಚಳವಳಿಯಲ್ಲಿ ಕೈಜೋಡಿಸಲಿದ್ದು, ಜನಾಕ್ರೋಶದ ಮೂಲಕ ಉದ್ಯೋಗ ಹಕ್ಕಿಗಾಗಿ ಜನ ಹೋರಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಪೋಸ್ಟರ್ ನಲ್ಲಿ ಬಳಸಬಹುದಾದ ಘೋಷಣೆಗಳು
*ತುಳುನಾಡ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್*
*ಮಹಿಷಿ ವರದಿ ಶಿಫಾರಸ್ಸುಗಳು ಕಾಯ್ದೆಯಾಗಲಿ*
*ನಮ್ಮ ಪಾಲು ನಮಗೆ ದೊರಕಲಿ, MRPL ನೇಮಕಾತಿ ರದ್ದಾಗಲಿ*
*ಸಂಸದರೆ, ಶಾಸಕರುಗಳೇ.... MRPL ಉದ್ಯೋಗಗಳು ಸ್ಥಳೀಯರ ಹಕ್ಕು, ಭರವಸೆ ಸಾಕು, ಉದ್ಯೋಗ ಬೇಕು*
*ಹಲೋ ಸಂಸದ ನಳಿನ್ ಕುಮಾರ್..., MRPL ಉದ್ಯೋಗ ನೇಮಕಾತಿ ರದ್ದುಗೊಳಿಸಿ, ಆಗದಿದ್ದಲ್ಲಿ ರಾಜಿನಾಮೆ ಕೊಡಿ*
*ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ, MRPL ಉದ್ಯೋಗ ಭಿಕ್ಷೆಯಲ್ಲ, ನಮ್ಮ ಹಕ್ಕು*
*ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೇ..*
*ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ ಕಂಪೆನಿಗಳಿಗೆ ಬೀಗ ಜಡಿಯಿರಿ*
*ಮಣ್ಣಿನ ಮಕ್ಕಳಿಗೆ ಉದ್ಯೋಗ ಒದಗಿಸದ MRPL ವಿಸ್ತರಣೆಗೆ ಭೂ ಸ್ವಾಧೀನ ತಕ್ಷಣ ಸ್ಥಗಿತಗೊಳ್ಳಲಿ*