ಕೋವಿಡ್ ಎರಡನೇ ಅಲೆಯನ್ನು ಸಮಾರೋಪಾದಿಯಲ್ಲಿ ನಿಯಂತ್ರಣ ಮಾಡಲು ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಕೇಂದ್ರ, ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ..
ಬೆಳ್ತಂಗಡಿ ತಹಶಿಲ್ದಾರರ ಮೂಲಕ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ನಿಯೋಗವು ರಾಜ್ಯ, ಕೇಂದ್ರ ಸರ್ಕಾರಗಳು ಕಳೆದ ಒಂದು ವರ್ಷಗಳಿಂದ ಕೋವಿಡ್ 19 ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣದಿಂದಾಗಿ ಎರಡನೇ ಅಲೆ ಜೀವಹಾನಿಗೆ ಕಾರಣವಾಗಿದೆ. ಈ ಸಾವಿಗೆ ಸರ್ಕಾರಗಳು ನಿರ್ಲಕ್ಷ್ಯ, ಬೇಜವ್ದಾರಿ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಆರ್ಥಿಕ ಬಿಕ್ಕಟ್ಟಿನ ನಡುವೆ ಬರಗಾಲ, ಪ್ರಾಕೃತಿಕ ವಿಕೋಪ, ನೆರೆಯಿಂದಾಗಿ ರಾಜ್ಯದ ಜನತೆ ನಲುಗಿದ್ದು , ಕೋವಿಡ್ ಎರಡನೇ ಅಲೆಯ ನೆಪದಲ್ಲಿ ಮತ್ತೆ ಅವೈಜ್ಞಾನಿಕ ಲಾಕ್ ಡೌನ್ ಜನತೆಯನ್ನು ಬಾನಲೆಯಿಂದ ಬೆಂಕಿಗೆ ಎಸೆದಂತಾಗಿದೆ ಎಂದು ಆರೋಪಿಸಿದೆ.
ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000/- ಒದಗಿಸುವ ಜೊತೆಗೆ ಪ್ರತಿ ಕುಟುಂಬಕ್ಕೆ ಸಮಗ್ರ ಆಹಾರಧಾನ್ಯಗಳನ್ನು ಒದಗಿಸಬೇಕು , ಸಾಮಾಜಿಕ ಪಿಂಚಣಿದಾರರ ಪಿಂಚಣಿ ತಕ್ಷಣ ಬಿಡುಗಡೆ ಮಾಡಬೇಕು , ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಿ ಸರ್ಕಾರವೇ ಖರೀದಿಸಲು ಕ್ರಮ ಕೈಗೊಳ್ಳಬೇಕು , ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು , ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು , ಕೋವಿಡ್ ಮರಣಗಳಿಗೆ ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು ಒತ್ತಾಯಿಸಿರುವ ನಿಯೋಗವು , ಖಾಸಗಿ ಆಸ್ಪತ್ರೆಗಳು ಕೋವಿಡ್ 19 ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದೆ , ಆ ಕಾರಣಕ್ಕಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಉಚಿತ ಚಿಕಿತ್ಸೆ ನೀಡಬೇಕು , ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ವ್ಯಾಕ್ಸಿನ್ , ಆಕ್ಸಿಜನ್ , ಬೆಡ್ ಒದಗಿಸುವ ಜೊತೆಗೆ ರಾಜ್ಯವನ್ನು ಕೋವಿಡ್ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ , ನ್ಯಾಯವಾದಿ ಶಿವಕುಮಾರ್ ಎಸ್. ಎಂ, ಸಿಐಟಿಯು ತಾಲೂಕು ಉಪಾಧ್ಯಕ್ಷ ಶೇಖರ್ ಎಲ್ , ಯುವಜನ ನಾಯಕ ಸುಜೀತ್ ಉಜಿರೆ ಉಪಸ್ಥಿತರಿದ್ದರು.
