ಮಂಗಳೂರು: ದ್ವಿಚಕ್ರ ವಾಹನದ ಹಿಂಬದಿಗೆ ನಾಯಿಯನ್ನು ಕಟ್ಟಿ ಅಮಾನವೀಯವಾಗಿ ಎಳೆದೊಯ್ದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಪೈಕಿ ಒಬ್ಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
ಬಂಧಿತ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ನೀಲಪ್ಪ ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಹೊರವಲಯದಲ್ಲಿ ಇರುವ ಸುರತ್ಕಲ್ ಸಮೀಪ ಎನ್‌ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಮಾನವ ಸ್ವರೂಪಿ ರಾಕ್ಷಸರು ಈ ಕೃತ್ಯ ಎಸಗಿದ್ದರು.
ಈ ಘಟನೆಯನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಶೂಟಿಂಗ್ ಮಾಡಿ ಪ್ರಾಣಿ ದಯಾ ಸಂಘದ ಸದಸ್ಯರ ಜೊತೆ ಶೇರ್ ಮಾಡಿದ್ದರು.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಅದರಂತೆ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಎಪ್ರಿಲ್ 15ರಂದು ರಾತ್ರಿ ಸುಮಾರು 8-30ಕ್ಕೆ ಈ ಘಟನೆ ನಡೆದಿದ್ದು, ಬೈಕ್‌ನ ಹಿಂದೆ ಇನ್ನೊಂದು ನಾಯಿ ಕೂಡ ಓಡೋಡಿ ಬಂದಿದೆ. ಆರೋಪಿಗಳು ಸರ್ವಿಸ್ ರಸ್ತೆಯಲ್ಲಿ ನಾಯಿಯನ್ನು ಅಮಾನುಷವಾಗಿ ಕಟ್ಟಿ ಎಳೆದೊಯ್ದಿದ್ದರು.

