ಮಿಜಾರು: ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯುಷ್ ಮಂತ್ರಾಲಯದ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ನ್ಯಾಚುರೋಪತಿ ಹಾಗೂ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಜಂಟಿ ಆಶ್ರಯದಲ್ಲಿ ಬೃಹತ್ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಮೂರು ವರ್ಷಗಳಿಂದ ಆಯೋಜನೆಗೊಳ್ಳುತ್ತಿದ್ದು, ಈ ಬಾರಿ ಶಿಬಿರವು ಮಾರ್ಚ್ 21, 22 ಹಾಗೂ 24ರಂದು ಮೈಸೂರು,ಮಿಜಾರು ಹಾಗೂ ಬಜ್ಪೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಕೃತಿ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದ್ದು, ಸ್ವ ಸ್ವಾಸ್ಥ್ಯದ ಮೂಲಕ ಸ್ವಾವಲಂಬನೆ ಎಂಬ ವಿಷಯದ ಆಧಾರದಲ್ಲಿ ಈ ಭಾರಿಯ ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ ಉಚಿತ ಮಾಲೀಶು ಚಿಕಿತ್ಸೆ, ರಿಪ್ಲೆಕ್ಸಾಲಜಿ ಅಕ್ಯುಪ್ರೆಶರ್, ಯೋಗ ಚಿಕಿತ್ಸೆ, ಪಥ್ಯಾಹಾರ ಸಲಹೆ, ಜಲ ಚಿಕಿತ್ಸೆ, ಕಪ್ಪಿಂಗ್ ಚಿಕಿತ್ಸೆಗಳು ಲಭ್ಯವಿವೆ. ಜೊತೆಗೆ ಶಿಬಿರಾರ್ಥಿಗಳಿಗೆ ಆರೋಗ್ಯವರ್ಧಕ ಕಿಟ್‍ಗಳನ್ನು ನೀಡಲಾಗುವುದು ಎಂದು ಹೇಳಿದರು.
ಈ ಕಿಟ್ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುವ ಡ್ರೈ ಫ್ರುಟ್ಸ್, ವಿಟಮಿನ್ ಸಿ ಹೇರಳವಾಗಿರುವ ಹಣ್ಣುಗಳಾದ ಮುಸುಂಬಿ, ನೆಲ್ಲಿಕಾಯಿ, ಇದರ ಜೊತೆಗೆ ನೀಲಗಿರಿ ಎಣ್ಣೆ, ಮುಖದ ಮಾಸ್ಕ್ ಹಾಗೂ ಗಾಂಧೀಜಿಯವರ ಪ್ರಕೃತಿ ಚಿಕಿತ್ಸಾ ಒಲವು ಮತ್ತು ಅನುಸರಿಸಿದ ವಿಧಾನಗಳನ್ನು ಪರಿಚಯಿಸುವ ಕಿರುಪುಸ್ತಕವನ್ನು ಒಳಗೊಂಡಿದೆ. ರೋಗ ನಿರೋಧಕ ಆಹಾರಾಭ್ಯಾಸದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಣ್ಣು ತರಕಾರಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಈ ಬೃಹತ್ ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ. ಭವಿಷ್ಯದಲ್ಲಿ ಈ ಶಿಬಿರಾರ್ಥಿಗಳು ಪ್ರಕೃತಿ ಚಿಕಿತ್ಸೆಗಾಗಿ ಆಳ್ವಾಸ್ ನ್ಯಾಚುರೋಪತಿ ಕಾಲೇಜಿಗೆ ದಾಖಲಾದರೆ ಅವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುವುದು. ಸಾರ್ವಜನಿಕರ ಆಶಯದ ಮೇರೆಗೆ ಬೇರೆಡೆ ಕೂಡ ಶಿಬಿರವನ್ನು ನಡೆಸಲಾಗುವುದು ಎಂದು ಡಾ. ವನಿತಾ ಶೆಟ್ಟಿ ತಿಳಿಸಿದ್ದಾರೆ.