ಸುಬ್ರಹ್ಮಣ್ಯ: ಆಪರೇಷನ್ ಕಮಲ ಸಂದರ್ಭದಲ್ಲಿ ಪಕ್ಷಾಂತರಗೊಂಡಿದ್ದ ಶಾಸಕರು ಮುಂಬೈನಲ್ಲಿ ಇದ್ದಾಗ ಅಲ್ಲಿ ಅನೈತಿಕ ಘಟನೆಗಳು ಯಾವುದೂ ನಡೆದಿಲ್ಲ. ಒಂದು ವೇಳೆ, ನಡೆದಿದ್ದರೆ, ಯಾರಲ್ಲಾದರೂ ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸಚಿವ ಭೈರತಿ ಬಸವರಾಜು ಹೇಳಿದ್ದಾರೆ.
ಸುಬ್ರಹ್ಮಣ್ಯಕ್ಕೆ ತೆರಳುವ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹ ಗುಮಾನಿ ಮೇರೆಗೆ ನಾವು ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಹೇಳಿದ್ದಾರೆ.
ಕೋರ್ಟ್ ಮುಂದೆ ಅರ್ಜಿ ಹಾಕಬಾರದು ಎಂಬ ನಿಯಮ ಏನಾದರೂ ಇದೆಯಾ...? ಕಾಂಗ್ರೆಸ್‌ನಿಂದ ಬಂದಿದ್ದೇವೆ ಎಂಬ ಏಕೈಕ ಕಾರಣಕ್ಕೆ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಭೈರತಿ, ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.
ಮಾಧ್ಯಮಗಳು ತಮ್ಮ ವಿರುದ್ಧ ವರದಿಯನ್ನು ಬಿತ್ತರಿಸಬಾರದೆಂದು ನ್ಯಾಯಾಲಯದ ಮೊರೆ ಹೋದ ಆರು ಜನ ಸಚಿವರ ತಂಡದಲ್ಲಿರುವ ಕರ್ನಾಟಕ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಧ್ಯಾಹ್ನ ವೇಳೆಗೆ ಕುಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವರು ಸಾಯಂಕಾಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿ,ದೇವರ ದರ್ಶನ ಪಡೆದರು.
ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಸಚಿವ ಭೈರತಿ ಬಸವರಾಜು ಅವರನ್ನು ಸ್ವಾಗತಿಸಿದರು. ದೇವರ ದರ್ಶನ ಪಡೆದು ಹೊರಗಡೆ ಬಂದ ಸಚಿವರನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಪ್ರಯತ್ನ ಮಾಡಿದರೂ ಯಾವುದೇ ಮಾತು ಹೇಳದೇ ಧರ್ಮಸ್ಥಳದ ಕಡೆಗೆ ಪ್ರಯಾಣ ಬೆಳೆಸಿದರು.
ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಲಿರುವ ಸಚಿವರು ಅಲ್ಲೇ ವಾಸ್ತವ್ಯ ಹೂಡಿ ನಾಳೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ.
