-->
Accident in NH | ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಯುವತಿ ಸಾವು, ಮೂವರು ಗಂಭೀರ

Accident in NH | ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಯುವತಿ ಸಾವು, ಮೂವರು ಗಂಭೀರ


ನಗರದ ಹೊರವಲಯದಲ್ಲಿ ಇರುವ ಕುಳಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.


ಮೃತ ಯುವತಿಯನ್ನು 26 ವರ್ಷದ ಸುಹಾನಾ ಎಂದು ಗುರುತಿಸಲಾಗಿದೆ. ಮೂಲತಃ ಕೃಷ್ಣಾಪುರ ಚೊಕ್ಕಬೆಟ್ಟು ನಿವಾಸಿಯಾಗಿರುವ ಈಕೆ ಪ್ರಸ್ತುತ ಬೋಂದೇಲ್ ನಿವಾಸಿ.


ಕಾರಿನಲ್ಲಿ ಸುಹಾನಾ ಸಹೋದರಿ ಫಾತಿಮಾ ಶೌರೀನ್, ಸಹೋದರರಾದ ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಪ್ರಯಾಣಿಸುತ್ತಿದ್ದರು. ಇವರೆಲ್ಲರಿಗೂ ಗಂಭೀರ ಪ್ರಮಾಣದ ಗಾಯಗಳಾಗಿವೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಗುರುವಾರ ಚಿಕ್ಕಮಗಳೂರಿನಲ್ಲಿ ನಡೆಯಲಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಇವರು ನಗರಕ್ಕೆ ಆಗಮಿಸಿ ಆಹಾರ ಪಾರ್ಸೆಲ್ ಮಾಡಿಸಿಕೊಂಡು ಕೃಷ್ಣಾಪುರದ ಚೊಕ್ಕಬೆಟ್ಟಿಗೆ ತೆರಳುತ್ತಿದ್ದಾಗ ಕುಳಾಯಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ಕಾರು ಚಲಾಯಿಸುತ್ತಿದ್ದ ರಾಹಿಲ್ ಶಮೀಮ್‌ಗೆ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ಕಾರು ಬಂದಂತೆ ಭಾಸವಾಗಿದ್ದು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನ ನಡೆಸಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಕಾರಿನಲ್ಲಿದ್ದ ಎಲ್ಲ ನಾಲ್ಕು ಮಂದಿಗೂ ಗಾಯಗಳಾಗಿದ್ದು, ಆ ಪೈಕಿ ಸುಹಾನಾ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವನ್ನಪ್ಪಿದರು. ಸುಹಾನಾ ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.


ಈ ಬಗ್ಗೆ ಮಹಮ್ಮದ್ ರಿಯಾಜ್ ನೀಡಿದ ದೂರಿನಂತೆ ಸಂಚಾರ ಉತ್ತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article