ಬಿಜೆಪಿಯ ಅತೃಪ್ತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಿಸಿದ ಬಾಂಬ್ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ಯಾರೂ ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಇದನ್ನು ಮಾಡಲಾಗಿದೆ. ಆ ಸಿಡಿಯನ್ನು ಇಟ್ಟುಕೊಂಡೆ ಇಬ್ಬರು ಸಚಿವರಾಗಿದ್ದಾರೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿಯನ್ನು ಬ್ಲಾಕ್ಮೇಲ್ ಮಾಡಲಾಗುತ್ತಿದೆ. ಬಿಜೆಪಿಗೆ ಇತ್ತೀಚೆಗೆ ಆಗಮಿಸಿದ ಇಬ್ಬರು ಶಾಸಕರು ಸಿಡಿಯನ್ನು ಇಟ್ಟುಕೊಂಡೇ ಸಚಿವರಾಗಿದ್ದಾರೆ. ಸಿಡಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿಯನ್ನು ಕೆಲವರು ತಮ್ಮ ತಾಳಕ್ಕೆ ಕುಣಿಸುತ್ತಿದ್ದಾರೆ ಎಂದು ಯತ್ನಾಳ್ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರಿಗೂ ಈ ಬಗ್ಗೆ ಸಮಗ್ರ ಮಾಹಿತಿ ಇದೆ. ಕಾಂಗ್ರೆಸ್ ಶಾಸಕರು ಈ ದೌರ್ಬಲ್ಯವನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದಿಂದ ಹೇರಳವಾದ ಅನುದಾನವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಸಿಡಿಗೆ ಸಂಬಂಧಿಸಿದ ವಿಚಾರ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೂ ತಿಳಿದಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಕೆ.ಜೆ. ಜಾರ್ಜ್, ಲಕ್ಷ್ಮಿ ಹೆಬ್ಬಾಳಕರ್ ಮುಂತಾದವರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತರುತ್ತಿದ್ದಾರೆ ಎಂದು ಅವರು ಕಾರ್ಯಕ್ರಮವೊಂದರ ಬಳಿಕ ತಿಳಿಸಿದರು.
