ಮಂಗಳೂರಲ್ಲಿ ಸದ್ದಿಲ್ಲದೆ ಮತ್ತೊಂದು ಗ್ಯಾಂಗ್ ತಲೆ ಎತ್ತಿದೆ.. ಅದುವೇ ಮಾಯಾ ಗ್ಯಾಂಗ್. ಈ ಗ್ಯಾಂಗ್ ಮತ್ತು ಇನ್ನೊಂದು ಗ್ಯಾಂಗ್ ಸೇರಿ ಮಂಗಳೂರು ಗೋಲೀಬಾರ್‌ಗೆ ಪ್ರತೀಕಾರವಾಗಿ ಪೊಲೀಸ್ ಅಧಿಕಾರಿಯ ಹತ್ಯೆಗೆ ಯತ್ನಿಸಿದೆ.
ಕಳೆದ ತಿಂಗಳು ಮಂಗಳೂರಿನ ನ್ಯೂಚಿತ್ರ ಜಂಕ್ಷನ್ ಬಳಿ ನಡೆದಿದ್ದ ಪೊಲೀಸ್ ಅಧಿಕಾರಿ ಗಣೇಶ್ ಕಾಮತ್ ಹತ್ಯೆ ಯತ್ನದ ಹಿಂದೆ ಈ ಗ್ಯಾಂಗ್ ಇದೆ ಎಂಬುದು ಖಚಿತವಾಗಿದೆ ಎನ್ನುವುದನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ದೃಢಪಡಿಸಿದ್ದಾರೆ.
ಡಿಸೆಂಬರ್ 16ರಂದು ಹಾಡಹಗಲೇ ಪೊಲೀಸ್ ಅಧಿಕಾರಿಯನ್ನು ಅಮಾನುಷವಾಗಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿ ಮಹಮ್ಮದ್ ನವಾಜ್ (೩೦), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (೨೨), ಕುದ್ರೋಳಿ ನಿವಾಸಿ ಅಬ್ದುಲ್ ಖಾದರ್ ಫಹಾದ್ (೨೩), ಬಜಪೆ ನಿವಾಸಿ ಶೇಖ್ ಮಹಮ್ಮದ್ ಹ್ಯಾರಿಸ್ ಯಾನಿ ಜಿಗ್ರಿ (೩೧), ಕುದ್ರೋಳಿ ನಿವಾಸಿ ರಾಹಿಲ್ ಯಾನೆ ಚೋಟು ರಾಹಿಲ್ (೧೮), ತಣ್ಣಿರು ಬಾವಿ ನಿವಾಸಿ ಮಹಮ್ಮದ್ ಖಾಯಿಸ್ (೨೪) ಬಂಧಿತ ಆರೋಪಿಗಳು.
Watch this video also:
ಇದಕ್ಕೂ ಮುನ್ನ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು, ಆರೋಪಿಗಳಿಂದ ಭಯಾನಕ ಸಂಗತಿಗಳು ಬಯಲಾಗಿದೆ. ಅದೇನೆಂದರೆ, ಮಂಗಳೂರಲ್ಲಿ ಸದ್ದಿಲ್ಲದೆ ಮಾಯಾ ಗ್ಯಾಂಗ್ ಎಂಬ ಡೆಡ್ಲಿ ತಂಡ ಕಾರ್ಯಾಚರಣೆ ಆರಂಭಿಸಿದ್ದು, ಇನ್ನೊಂದು ಗ್ಯಾಂಗ್ ಸಹಕಾರದೊಂದಿಗೆ ಸಮಾಜ ವಿದ್ರೋಹಿ ಕೃತ್ಯಗಳನ್ನು ನಡೆಸುತ್ತಿದೆ.
ಈ ಬಗ್ಗೆ ಪೊಲೀಸರು ಹಲವು ಮಹತ್ವದ ವಿಷಯಗಳನ್ನು ಕಲೆ ಹಾಕಿದ್ದು, ಇನ್ನಷ್ಟು ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.






