Libzet, the great | ಎಲ್ಲರಿಗೂ ಸಿಗಲ್ಲ ಇಂತಹ ಆಪ್ತ ಸಹಾಯಕರು: ಖಾದರ್‌ ಪಿಎಂ ಲಿಬ್ಜತ್‌ಗೆ ದೊಡ್ಡ ಸಲಾಮ್‌





ಲೇಖಕರು: ಆರೀಫ್ ಪಡುಬಿದ್ರಿ, ಹಿರಿಯ ಪತ್ರಕರ್ತರು


ಆಪ್ತರೊಬ್ಬರ ಸಂಬಂಧಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕ್ಲಿಷ್ಟಕರ ಶಸ್ತ್ರಚಿಕಿತ್ಸೆ, ಯಂತ್ರ ಅಳವಡಿಕೆ ನಡೆದಿತ್ತು. ಏಳು ದಿ‌ನಗಳ ಚಿಕಿತ್ಸೆ ವೆಚ್ಚ 20 ಲಕ್ಷ ದಾಟಿತ್ತು! ಆಸ್ಪತ್ರೆ ವೆಚ್ಚದ ಬಹುತೇಕ ವ್ಯವಸ್ಥೆಯನ್ನು ಅವರ ಸಂಬಂಧಿಕರು, ಆಪ್ತರ ಮೂಲಕ ಮಾಡಿಕೊಂಡಿದ್ದರು.



ಆಸ್ಪತ್ರೆ ಕಡೆಯಿಂದ ಸ್ವಲ್ಪ ರಿಯಾಯಿತಿ ಸಿಗಲಿ ಎಂದು ಶಿಫಾರಸಿಗಾಗಿ ಅವರ ಚಿರಪರಿಚಿತ ಒಬ್ಬ ಸಂಸದರು, ಇನ್ನೊಬ್ಬ ಸಂಸದರ ಆಪ್ತ ಕಾರ್ಯದರ್ಶಿ, ನಂತರ ಒಬ್ಬ ಡಿಸಿಎಮನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತು. ಯಾರಿಂದಲೂ ಸಕಾರಾತ್ಮಕ ಸ್ಪಂದನ ಸಿಕ್ಕಿಲ್ಲ.

ಇಲ್ಲಿ ಬಿಲ್ ರೆಡಿ ಆಗುತ್ತಿದೆ, ಡಿಸ್ಚಾರ್ಜ್ ಆಗಬೇಕಿದೆ. ಏನು ಮಾಡುವುದು? ನೀವೆನಾದರೂ ಮಾಡಿ ಎಂಬ ಮನವಿ ಬರುತ್ತಿತ್ತು.



ನಮ್ಮ ಕೊನೆಯ ಅಸ್ತ್ರ ಲಿಬ್‌ಝತ್ ಅವರನ್ನು ಸಂಪರ್ಕಿಸುವುದು.

ಲಿಬ್‌ಝತ್ ಅಂದರೆ, ಶಾಸಕ ಯು.ಟಿ.ಖಾದರ್ ಅವರ ಆಪ್ತ ಸಹಾಯಕ. ಯಾವ ಸಂದರ್ಭದಲ್ಲೂ, ಎಷ್ಟು ಗಂಟೆಗೂ ಸುಲಭವಾಗಿ ಸಿಗುವ ವ್ಯಕ್ತಿ.

ಸರಿ, ಲಿಬ್‌ಝತ್ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದಾಗ, ರೋಗಿಯ ಡಿಟೈಲ್ ಪಡೆದು, ಹತ್ತು ನಿಮಿಷ ಕಾಲಾವಧಿ ಕೇಳಿದರು.



ಹತ್ತು ನಿಮಿಷದ ನಂತರ ಅವರೇ ಕಾಲ್ ಮಾಡಿ, ಖಾದರ್ ಸರ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ಪೇಶೆಂಟ್ ಪಾರ್ಟಿಯು ಬಿಲ್ಲಿಂಗ್ ವಿಭಾಗದಲ್ಲಿ ಇಂಥ ಮೇಡಮ್ ಬಳಿಗೆ ಹೋಗಿ ಮಾತನಾಡಲಿ ಎಂದು ಸಲಹೆ ಮಾಡಿದರು.



ಸಂಜೆ ಹೊತ್ತು ನಾನು‌ ಮತ್ತು ಸಹೋದ್ಯೋಗಿ ಮಿತ್ರ ಆಸ್ಪತ್ರೆಯ ಬಿಲ್ಲಿಂಗ್ ಸೆಕ್ಷನ್ ಬಳಿಗೆ ಹೋಗಿಯೇ ಬಿಟ್ಟೆವು. ಪೇಶೆಂಟ್ ಪಾರ್ಟಿ ಕೂಡಾ ಅಲ್ಲಿಗೆ ಬಂದರು. ಬಿಲ್ ಆಗುತ್ತಿದೆ, ಸ್ವಲ್ಪ ಕುಳಿತುಕೊಳ್ಳಿ ಎಂದರು.



ಸುಮಾರು ಒಂದು ಗಂಟೆ ಕುಳಿತಿದ್ದೆವು. ನಾವು ಹರಟುತ್ತಿದ್ದೆವು.



ಜನರು ಬರುವುದು, ಬಿಲ್ ಮೊತ್ತ ಕೇಳುವುದು, ಸ್ವಲ್ಪ ಕಡಿಮೆ ಮಾಡಿ ಎಂದು ಮನವಿ ಮಾಡುವುದು, ಸಿಬ್ಬಂದಿ ತಮ್ಮ ಅಸಹಾಯಕತೆ ಹೇಳುವುದು, ಕೊ‌ನೆಗೂ ಮುಖ ಸಣ್ಣದು ಕ್ಯಾಶ್ ಲೆಕ್ಕ ಮಾಡಿ ಅಥವಾ ಕಾರ್ಡ್ ಸ್ವೈಪ್ ಮಾಡಿ ಪಾವತಿಸುವುದು ಗಮನಿಸುತ್ತಿದ್ದೆ!



ಜನರಿಗೆ ಆರೋಗ್ಯ, ಜೀವ ಉಳಿಸಲು ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ. ಆ ಕಾರ್ಡ್.... ಈ ಕಾರ್ಡ್‌ಗಳಿದ್ದರೂ ಇಂಥ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಬಾರದ ದುಸ್ಥಿತಿ. ದುಡಿದು ಅಗತ್ಯಕ್ಕೆಂದು ಜೋಪಾನವಾಗಿಟ್ಟಿದ್ದ ಹಣ, ಸಾಲ ಮಾಡಿ ತಂದ ಮೊತ್ತ, ಒಡವೆ ಮಾರಿ ತಂದದ್ದು.... ಈ ಪಾವತಿ ಪ್ರಕ್ರಿಯೆ ನಿರಂತರ ನಡೆಯುವಂಥದ್ದು. ಕಷ್ಟ ಕಾಲ ಅಂದರೆ ಇದೇನಾ? ಇದಕ್ಕೆ ಪರಿಹಾರ ಇಲ್ಲವೇ? ಕೊನೆಗೂ ಹಣ ಯಾಕೆ ಬೇಕು ಎಂಬ ಪ್ರಶ್ನೆಗೆ ಉತ್ತರ!



ಹಾಂ, ನಮ್ಮ ಸರದಿ ಬಂತು. ಒಟ್ಟು ಬಿಲ್‌ನಲ್ಲಿ ನಿಮ್ಮವರು ಫೋನ್ ಮಾಡಿ ಹೇಳಿದ್ದರಿಂದ ಒಂದು ಲಕ್ಷ ರೂಪಾಯಿ ಕಡಿಮೆ ಮಾಡಲು ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ ಎಂದು ವಿವರಿಸಿದರು. ಸ್ವಲ್ಪ ಸಮಾಧಾನ ಆಯಿತು. ಪೇಶೆಂಟ್ ಪಾರ್ಟಿ ಬಾಕಿ ಹಣ ಪಾವತಿಸಿದರು. ನಮಗೊಂದು‌ ಥ್ಯಾಂಕ್ಸ್ ಹೇಳಿದರು. ನಾವು ಬಂದೆವು.


ನಿಜವಾದ ಥ್ಯಾಂಕ್ಸ್ ಸಲ್ಲಬೇಕಾದುದು, ಎಂಥ ಕಾಲದಲ್ಲೂ ತಕ್ಷಣ ಸ್ಪಂದಿಸುವ ಲಿಬ್‌ಝತ್‌ಗೆ. ನಿಮ್ಮ ದುಆ, ಪ್ರಾರ್ಥನೆಗಳಲ್ಲಿ ಲಿಬ್‌ಝತ್ ಅವರನ್ನೂ, ಅವರ ಬಾಸ್ ಯು.ಟಿ. ಖಾದರ್ ಅವರನ್ನೂ ಸೇರಿಸಿ. ಪಕ್ಷ, ಜಾತಿ, ಧರ್ಮ ಯಾವುದೇ ಇರಲಿ, ನಮಗೆ ಬೇಕಾಗಿರುವುದು ಮನುಷ್ಯತ್ವ.

(ಫೇಸ್‌ಬುಕ್ ಗೋಡೆಯಿಂದ)