-->

appeal to Fisheries DD | ಹೊಯ್ಗೆಬಜಾರಿನ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳ ಒಕ್ಕಲ್ಲೆಬ್ಬಿಸಬೇಡಿ: ಅಧಿಕಾರಿಗಳಿಗೆ ಡಿವೈಎಫ್‌ಐ ಮನವಿ

appeal to Fisheries DD | ಹೊಯ್ಗೆಬಜಾರಿನ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳ ಒಕ್ಕಲ್ಲೆಬ್ಬಿಸಬೇಡಿ: ಅಧಿಕಾರಿಗಳಿಗೆ ಡಿವೈಎಫ್‌ಐ ಮನವಿ





ಹೊಯ್ಗೆಬಜಾರಿನ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳ ಒಕ್ಕಲ್ಲೆಬ್ಬಿಸಬೇಡಿ ಎಂದು ಮಂಗಳೂರು ಮೀನುಗಾರಿಕಾ ಸಹಾಯಕ ನಿರ್ದೇಶಕರಿಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಮನವಿ ಮಾಡಿದೆ.

ಶಿಳ್ಳೆಕ್ಯಾತ ಅಲೆಮಾರಿ ಸಮುದಾಯವು ಮಂಗಳೂರಿನ ಹಲವಾರು ಕಡೆ ನದಿ ತೀರದಲ್ಲಿ ತಮ್ಮ ಗುಡಿಸಲು ಕಟ್ಟಿಕೊಂಡು ಕಳೆದ ಹಲವಾರು ವರುಷಗಳಿಂದ ತೆಪ್ಪದ ಮೂಲಕ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯುವ ಕಾಯಕದೊಂದಿಗೆ ಜೀವನ ನಿರ್ವಹಿಸುತ್ತಿದ್ದಾರೆ. ಅವುಗಳಲ್ಲಿ ಎಂಟು ಕುಟುಂಬ ಕಳೆದ 15-20 ವರುಷಗಳಿಂದ ಹೊಯಿಗೆಬಜಾರಿನ ನದಿ ತೀರದ ಪಕ್ಕ ಗುಡಿಸಲುಗಳನ್ನು ನಿರ್ಮಿಸಿ ಜೀವನ ಸಾಗಿಸುತ್ತಿದ್ದರು. ಇವರು ವಾಸಿಸುವ ಗುಡಿಸಲುಗಳಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ.


ಇಂತಹ ಸಂದರ್ಭದ ನಡುವೆ ಮೊದಲೇ ಸರಿಯಾದ ಸ್ವಂತ ನೆಲೆಗಳಿಲ್ಲದೆ ಸಂಕಷ್ಟವನ್ನು ಅನುಭವಿಸುತ್ತಿರುವ ಹೊಯಿಗೆಬಜಾರಿನ ಕುಟುಂಬಗಳನ್ನು ಅಲ್ಲಿಂದ ಕೂಡಲೇ ತೆರವುಗೊಳಿಸಲು ತಮ್ಮ ಇಲಾಖೆಯ ಸಿಬ್ಬಂದಿಗಳು ಒತ್ತಡ ಹೇರುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಇದರಿಂದ ಶಿಳ್ಳೆಕ್ಯಾತ ಕುಟುಂಬಗಳು ಆತಂಕಗೊಳಗಾಗಿರುತ್ತಾರೆ. ತಾವುಗಳು ಈ ಕುಟುಂಬಗಳನ್ನು ಏಕಾಏಕಿ ತೆರವುಗೊಳಿಸಿದರೆ ಅವರ ಮನೆ ಮಂದಿ ಮಕ್ಕಳೆಲ್ಲರೂ ಬೀದಿಪಾಲಾಗಲಿದ್ದಾರೆ ಎಂದು ಸಂಘಟನೆ ತನ್ನ ಮನವಿಯಲ್ಲಿ ಹೇಳಿದೆ.


ಸದ್ರಿ ಸ್ಥಳದಲ್ಲಿ ಯಾವುದೇ ರೀತಿಯ ಯೋಜನೆಗಳು ತಮ್ಮ ಇಲಾಖೆಯಿಂದ ಇಲ್ಲದೇ ಇರುವುದರಿಂದ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ಮುಂದಾಗಬಾರದು . ಅಥವಾ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ ನಂತರವಷ್ಟೇ ಅಲ್ಲಿಂದ ತೆರವುಗೊಳಿಸಬೇಕೆಂದು ಡಿವೈಎಫ್‌ಐ ಮನವಿ ಮಾಡಿದೆ.

ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದ ಮುಖಂಡರಾದ ವೆಂಕಟೇಶ್, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article