ಹೌದು, ಇದೊಂದು ಬಡಪಾಯಿಯ ವ್ಯಥೆಯ ಕಥೆ. ತನ್ನ ಜಮೀನು ಸರ್ವೇ ಮಾಡಿಕೊಡಿ ಎಂದು ಬಡಪಾಯಿ ವ್ಯಕ್ತಿಯೊಬ್ಬರು ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಸೂಕ್ತ ಶುಲ್ಕವನ್ನೂ ಪಾವತಿಸುತ್ತಾರೆ.
ಮರಳಿ ಬಂದು ಇಂದಲ್ಲ ನಾಳೆ ನನಗೆ ದೂರವಾಣಿ ಕರೆ ಬರಬಹುದು ಎಂದು ಕಾಯುತ್ತಾರೆ. ಸರ್ವೇ ಕಚೇರಿಗೂ ಅಲೆಯುತ್ತಾರೆ. ಆದರೆ, ಅವರಿಗೆ ಯಾವುದೇ ಕರೆಯೂ ಬರುವುದಿಲ್ಲ. ತಾನು ಹಾಕಿದ ಅರ್ಜಿ ಎಲ್ಲಿ ಹೋಯಿತು ಎಂಬುದೂ ತಿಳಿಯುತ್ತಿಲ್ಲ.
ಇದು ಯಾವುದೋ ಸಿನಿಮಾ ಕಥೆ ಅಲ್ಲ. ಮಂಗಳೂರು ಸರ್ವೇ ಕಚೇರಿಯ ಕಥೆ ಇದು.
ಮಂಗಳೂರು ನಗರದ ಹೊರ ವಲಯದಲ್ಲಿ ಇರುವ ಮರೋಳಿ ಗ್ರಾಮದ ವ್ಯಕ್ತಿಯೊಬ್ಬರು ಮಂಗಳೂರು ಸರ್ವೇ ಕಚೇರಿಗೆ ಅರ್ಜಿಯೊಂದನ್ನು ಹಾಕುತ್ತಾರೆ. ಶುಲ್ಕ ಸಹಿತ ಅರ್ಜಿ ಸಲ್ಲಿಸುತ್ತಾರೆ. ಇದಾಗಿ ಕೆಲವೇ ದಿನಗಳಲ್ಲಿ ಈ ಫೈಲ್ ಸಂಬಂಧಪಟ್ಟ ಸರ್ವೇಯರ್ ಕೈಗೆ ಹೋಗುತ್ತದೆ.
ಆದರೆ, ಆ ಬಳಿಕ 50 ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ದಿನಾ ಕಚೇರಿ ಅಲೆದು ಬೇಸತ್ತ ವ್ಯಕ್ತಿ ಕೊನೆಗೆ ಆ ಸರ್ವೇಯರ್ ಅವರ ಮೊಬೈಲ್ ಗೆ ಕರೆ ಮಾಡುತ್ತಾರೆ. ಆಗ ಅವರು ಉಡಾಫೆ ಮಾಡಿದ್ದು, ಬಡಪಾಯಿಯನ್ನು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದೆ.
ಕೊನೆಗೆ ಗತ್ಯಂತರ ಇಲ್ಲದೆ ಅವರು ಸ್ಥಳೀಯ ಶಾಸಕರ ಕಚೇರಿಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಶಾಸಕರು ಏನು ಮಾಡುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.