ಬೆಂಗಳೂರು: ಮಾರ್ಚ್ 2021ರಲ್ಲಿ ಲಭ್ಯವಾಗುವ ಸೀಮಿತ ಅವಧಿಯಲ್ಲಿ ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವ ಯಾವುದೇ ವಿಚಾರ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಪೂರ್ವಸಿದ್ಧತೆ ಮಾಡುತ್ತಿದೆ. ಶಾಲಾರಂಭ ಎಂಬ ಪ್ರಕ್ರಿಯೆ ಸುರಕ್ಷಿತವಾಗಿ ಮತ್ತು ಸುಲಲಿತವಾಗಿ ನಡೆಯಬೇಕು ಎಂಬುದು ನಮ್ಮ ಇರಾದೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮುಂಬರುವ ವರ್ಷದಲ್ಲಿ ಮಕ್ಕಳಿಗೆ ಹೊರೆಯಾಗದ ರೀರಿಯಲ್ಲಿ ಪಠ್ಯಕ್ರಮವನ್ನು ಅಂತಿಮಗೊಳಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗಿಯಾಗುವ ಅಭ್ಯರ್ಥಿಗಳನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಹೇಳಿದ ಅವರು, ಕನಿಷ್ಟ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯ ಅಗತ್ಯಗಳನ್ನು ಸಹ ಗಮನದಲ್ಲಿ ಇಡಲಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾಗಮ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳೂ ಅಳವಡಿಸಿಕೊಳ್ಳಬೇಕು ಎಂದು ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

 
 
 
 
 
 
 
 
 
 
 
 
 
 
 
 
 
 
