ಮುಂಬೈ: ಹಿಂದಿ ಚಿತ್ರರಂಗದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಥೆ (92)ಯವರು ಹೃದಯಾಘಾತದಿಂದ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭಾರತೀಯ ಚಿತ್ರಸಂಗೀತ ಕ್ಷೇತ್ರದಲ್ಲಿ ಸುಮಾರು 70 ವರ್ಷಗಳಿಗೂ ಅಧಿಕ ಕಾಲ ಗಾಯನದಲ್ಲಿ ನಿರತರಾಗಿದ್ದ ಆಶಾ ಭೋಸ್ಲೆ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಭಾಷೆಗಳಲ್ಲಿ ಸಾವಿರಾರು ಅಧಿಕ ಹಾಡುಗಳಿಗೆ ದನಿಯಾಗಿ ಜನಮನ ಗೆದ್ದಿದ್ದಾರೆ. 1948ರಲ್ಲಿ 'ಚುನಾರಿಯಾ' ಸಿನಿಮಾದ ಮೂಲಕ ತಮ್ಮ ಗಾಯನ ಯಾತ್ರೆ ಆರಂಭಿಸಿದ ಆಶಾ ಭೋಸ್ಲೆ, ಇಲ್ಲಿಯವರೆಗೆ ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಆಶಾ ಭೋಸ್ಲೆ ಅವರು 1967ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ ‘ಯಾಕೋ ಏನೋ ಸೆರಗು’ ಎಂಬ ಹಾಡನ್ನು ಹಾಡಿದ್ದರು. ಬಳಿಕ ವೈಜಯಂತಿಮಾಲಾ ಅವರ ಮೊದಲ ಕನ್ನಡ ಚಿತ್ರ, ‘ಆಶಾ ನಿರಾಶಾ’ ಚಿತ್ರದಲ್ಲೂ ಆಶಾ ಭೋಸ್ಲೆ ಹಾಡಿದ್ದರು. ಆದರೆ ಕೆಲ ಕಾರಣಗಳಿಂದ ಈ ಸಿನಿಮಾಕ್ಕೆ ಬಿಡುಗಡೆ ಭಾಗ್ಯ ಸಿಗಲೇ ಇಲ್ಲ. ದೂರದ ಬೆಟ್ಟ ಚಿತ್ರದಲ್ಲಿ ಜಿ.ಕೆ ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ‘ಸವಾಲು ಹಾಕಿ ಸೋಲಿಸಿ ಎಲ್ಲರ’ ಹಾಡಿಗೆ ಧ್ವನಿಯಾಗಿದ್ದರು. ಸುಮಾರು ವರ್ಷಗಳ ಬಳಿಕ ಆಶಾ ಭೋಸ್ಲೆ 2010ರಲ್ಲಿ ಮತ್ತೆ ಮುಂಗಾರು ಚಿತ್ರದ ‘ಹೇಳದೆ ಕಾರಣ ಹೋದೆಯಾ’ ಎಂಬ ಹಾಡನ್ನು ಹಾಡಿದ್ದರು.
ವಿಶಿಷ್ಟ ಧ್ವನಿ ಹಾಗೂ ವಿಶಿಷ್ಟ ಗಾಯನ ಶೈಲಿಯಿಂದಲೇ ಹೆಸರುವಾಸಿಯಾದ ಆಶಾ ಅವರಿಗೆ ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.