ಮಂಗಳೂರು ವಿಶ್ವವಿದ್ಯಾಲಯಕ್ಕೆ 6 ಪದಕ
85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಎರಡನೇ ದಿನದ ಮುಕ್ತಾಯಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಒಟ್ಟು ಒಂದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಆರು ಪದಕ ಪಡೆದಿದೆ.
ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟ: ನಿರ್ಮಲಾ (ಪ್ರಥಮ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ದ್ವಿತೀಯ) ಹಾಗೂ ಪುರುಷರ ವಿಭಾಗದಲ್ಲಿ 100 ಮೀ. ಓಟ: ವಿಭಾಸ್ಕರ್ ಕುಮಾರ್ (ದ್ವಿತೀಯ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ದ್ವಿತೀಯ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ (ದ್ವಿತೀಯ), ಶಾಟ್‌ಪುಟ್: ಅನಿಕೇತ್ (ತೃತೀಯ) ಸ್ಥಾನ ಪಡೆದಿದ್ದಾರೆ.
85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26
ಮಿಂಚಿದ ‘ಚೆನ್ನೈ ಎಕ್ಸ್ಪ್ರೆಸ್’: ಕೃಷಿಕ ದಂಪತಿ ಮಗಳಿಗೆ ವೇಗದ ಓಟದ ಚಿನ್ನ
ದಾಖಲೆ ಬರೆದ ಸ್ಯಾಮ್‌ಗೆ ತಾಯಿ ‘ಚೆಲ್ವಿ’ಯೇ ಪ್ರೇರಣೆ
ಮೂಡುಬಿದಿರೆ: ನೂತನ ಕೂಟ ದಾಖಲೆ ಬರೆದ ತಮಿಳುನಾಡಿನ ಕೊಯಮುತ್ತೂರು ಭಾರತೀಯರ್ ವಿಶ್ವವಿದ್ಯಾಲಯದ ಸ್ಯಾಮ್ ವಸಂತ ಎಸ್. (10.39 ಸೆ.) ಅವರು ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಪುರುಷರ ವಿಭಾಗದ ವೇಗದ ಓಟಗಾರರಾಗಿ ಮಂಗಳವಾರ ಇಲ್ಲಿ ಮೂಡಿಬಂದರು. ಚೆನ್ನೈಯ ಮದ್ರಾಸ್ ವಿಶ್ವವಿದ್ಯಾಲಯದ ಪ್ರತಿಮಾ ಸೆಲ್ವರಾಜ್ (11.74 ಸೆ.) ವೇಗದ ಓಟಗಾರ್ತಿಯಾಗಿ ಚಿನ್ನ ಗೆದ್ದು, ಮುಗುಳ್ನಕ್ಕರು.
ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಎರಡನೇ ದಿನವಾದ ಮಂಗಳವಾರ ಆಕರ್ಷಣೆಯಾದರು.
ಕೂಟದ ಪುರುಷ ವಿಭಾಗದ ವೇಗದ ಓಟದ ದಾಖಲೆಯು 2018ರಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿ.ಕೆ. ಇಳಕ್ಕಿಯ ದಾಸನ್ (10.41) ಹೆಸರಿನಲ್ಲಿತ್ತು. ಈ ವೇಗವನ್ನು ಸೆಮಿಫೈನಲ್‌ನಲ್ಲಿ ಸ್ಯಾಮ್ ವಸಂತ ಎಸ್ ಮುರಿದಿದ್ದು (10.39 ಸೆ.), ದಾಖಲೆಗೆ ಅರ್ಹರಾಗಿದ್ದಾರೆ. ಅವರು ಫೈನಲ್‌ನಲ್ಲಿ 10.44 ಸೆಕೆಂಡ್‌ನಲ್ಲಿ ಗುರಿ ತಲುಪಿದರು.
ಬಿದಿರೆಯ ನಾಡಲ್ಲಿ ಮುಂಜಾನೆಯಿಂದಲೇ ತೇವಾಂಶ ಹಾಗೂ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರಿಗೆ ತುಂತುರು ಮಳೆ ಸುರಿಯಿತು. ಮಳೆಯ ಸಿಂಚನದ ಬಳಿಕ ನಡೆದ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಕೊಯಮುತ್ತೂರು ಕೊಂಗಿನಾಡು ಕಾಲೇಜಿನ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಸ್ಯಾಮ್ ವಸಂತ ಚಿನ್ನ ಗೆದ್ದರು. ‘ನನ್ನ ಗೆಲುವಿಗೆ ತರಬೇತುದಾರ ವೇಲು ಮುರುಗನ್ ಹಾಗೂ ತಂದೆ-ತಾಯಿಯೇ ಕಾರಣ’ ಎಂಬ ಬರಹವನ್ನು ಅವರು ಪ್ರದರ್ಶಿಸಿ, ನಿಟ್ಟುಸಿರು ಬಿಟ್ಟರು.
ಮಾಸ್ಟರ್ ಸ್ಪ್ರಿಂಟರ್ ಚಾಂಪಿಯನ್ ಕಳೈ ಚೆಲ್ವಿ ಹಾಗೂ ನೂಲು ಗಿರಣಿ ಕಾರ್ಖಾನೆಯ ಕಾರ್ಮಿಕ ವಿ.ಸಬ್ರಹ್ಮಣ್ಯನ್ ಪುತ್ರ ಸ್ಯಾಮ್ ವಸಂತ್, ‘ವಿಶ್ವವಿದ್ಯಾಲಯದಲ್ಲಿ ನನ್ನ ವೇಗವನ್ನು ಗಮನಿಸಿದ ತರಬೇತುದಾರ ಮುರುಗನ್ ಅವರು, ನೀನು ದಾಖಲೆ ಮಾಡುತ್ತಿಯಾ’ ಎಂದಿದ್ದರು. ಅದು ನನಗೆ ಆತ್ಮಬಲ ತುಂಬಿತ್ತು. ತಂದೆಯ ಬೆಂಬಲ ಹಾಗೂ ತಾಯಿಯೇ ನನ್ನ ಶಕ್ತಿ’ ಎಂದು ಭಾವುಕರಾದರು.
ಪುರುಷರ ವಿಭಾಗದಲ್ಲಿ 10.54 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ, ಮಂಗಳೂರು ವಿಶ್ವವಿದ್ಯಾಲಯದ (ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ) ವಿಭಾಸ್ಕರ್ ಕುಮಾರ್ ದ್ವಿತೀಯ ಸ್ಥಾನ ಪಡೆದರು.
ವೇಗದ ಓಟಗಾರ್ತಿ ಪ್ರತಿಮಾ ಸೆಲ್ವರಾಜ್ ಚೆನ್ನೈಯ ಕೃಷಿಕ ದಂಪತಿ ಸುಮತಿ ಮತ್ತು ಸೆಲ್ವರಾಜ್ ದಂಪತಿಯ ಮಗಳು. ಎಂ.ಒ.ಪಿ ವೈಷ್ಣವಿ ಮಹಿಳಾ ಕಾಲೇಜಿನ ಎಂ.ಎ ಸಂವಹನ ವಿದ್ಯಾರ್ಥಿನಿ.
ಬೆಳಗ್ಗಿನ ನಸುಕಿನಲ್ಲಿ ನಡೆದ 20 ಕಿ.ಮೀ. ನಡಿಗೆಯಲ್ಲಿ ಪುರುಷರ ಪೈಕಿ ಪಂಜಾಬ್ ಆರ್‌ಐಎಂಟಿ ವಿ.ವಿ. ವಿಹ್ವೇಂದ್ರ ಸಿಂಗ್ (1:25:50.07) ಚಿನ್ನ ಗೆದ್ದರು. ಪುಣೆ ಸಾವಿತ್ರಿಬಾಯಿ ಫುಲೆ ವಿ.ವಿ. ಗಯಾತ್ ಗಣೇಶ್ ಚೌಧರಿ (1:40:15.41) ಮಹಿಳೆಯರ ಚಿನ್ನ ಗೆದ್ದರು.
ಫಲಿತಾಂಶ
ಪುರುಷರ ವಿಭಾಗ:
- 100 ಮೀ. ಓಟ: ಸ್ಯಾಮ್ ವಸಂತ ಎಸ್., ಕೊಯಮುತ್ತೂರು ಭಾರತೀಯರ್ ವಿ.ವಿ. (10.44)-1, ವಿಭಾಸ್ಕರ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯ (10.57)-2, ಗಿಟ್ಸನ್ ಥರ್ಮರ, ಚೆನ್ನೈಯ ಮದ್ರಾಸ್ ವಿ.ವಿ. (10.59)-3
- 400 ಮೀ. ಹರ್ಡಲ್ಸ್: ಮಹೇಂದ್ರನ್ ಎಸ್., ಚೆನ್ನೈ ಮದ್ರಾಸ್ ವಿ.ವಿ. (51.35)-1, ಆರ್ಯನ್ ಪ್ರಜ್ವಲ್ ಕಶ್ಯಪ್, ಮಂಗಳೂರು ವಿ.ವಿ. (51.55)-2, ಕಾರ್ತಿಜ್ ರಾಜ್ ಎ., ತಿರುನೇಲ್ವೆಲ್ಲಿ ಮನೋನ್ಮಣಿಯಂ ಸಂದರನಾರ್ ವಿ.ವಿ. (51.83)-3
- 20 ಕಿ.ಮೀ. ನಡಿಗೆ: ವಿಹ್ವೇಂದ್ರ ಸಿಂಗ್, ಪಂಜಾಬ್ ಆರ್‌ಐಎಂಟಿ ವಿ.ವಿ. (1:25:50.07)-1, ಸರ್ವತೇಜ್ ಪಟೇಲ್, ಅಯೋಧ್ಯಾ ಡಾ.ರಾಮಮನೋಹರ ಲೋಹಿಯಾ ವಿ.ವಿ. (1:27:28.03)-2, ದಶರಥ ನಿಂಗ ತಲ್ವಾರ್, ಬೆಂಗಳೂರು ನಗರ ವಿ.ವಿ (1:30:03.98)-3
- 800 ಮೀ. ಓಟ: ಸಂಕೇತ್, ರೋಹ್ತಕ್ ಎಂಡಿಯು ವಿ.ವಿ.(1:48.95) -1, ಪ್ರಥಮೇಶ್ ಅಮರಿಸ್ಲಾ ದಿಯೋರಾ, ಮಂಗಳೂರು ವಿ.ವಿ.(1:49.09) -2, ಅಮಿತ್ ಕುಮಾರ್, ಕಾನ್ಪುರ ಛತ್ರಪತಿ ಸಾಹುಜೀ ವಿ.ವಿ.(1:49.37) -3
- ಶಾಟ್‌ಪುಟ್: ವರೀಂದರ್ ಪಾಲ್ ಸಿಂಗ್, ಮೊಹಾಲಿ ಚಂಡೀಗಢ ವಿ.ವಿ (18.22ಮೀ.)-1, ಸಾವನ್, ಮೊಹಾಲಿ ಚಂಡೀಗಢ ವಿ.ವಿ (18.06ಮೀ.)-2, ಅನಿಕೇತ್, ಮಂಗಳೂರು ವಿ.ವಿ. (17.98ಮೀ)-3
- ಹೈ ಜಂಪ್: ಸುದೀಪ್, ಶಿವಮೊಗ್ಗದ ಕುವೆಂಪು ವಿ.ವಿ (2.11ಮೀ.)-1, ಮಹಮ್ಮದ್ ಫೈಜಲ್, ಚೆನ್ನೈಯ ಮದರಾಸ್ ವಿ.ವಿ. (2.09) -2, ಆದಿತ್ಯ ರಾಘವಂಶಿ, ಚಂಡೀಗಢ ವಿ.ವಿ. (2.06)-3
ಮಹಿಳೆಯರ ವಿಭಾಗ:
- 100 ಮೀ. ಓಟ: ಪ್ರತಿಮಾ ಸೆಲ್ವರಾಜ್, ಚೆನ್ನೈಯ ಮದ್ರಾಸ್ ವಿಶ್ವವಿದ್ಯಾಲಯದ (11.74)-1, ಸುಬ್ದರ್ಶಿನಿ, ತಮಿಳುನಾಡು ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (11.89)-2, ತನಿಷಾ ರಾಘವ್, ದೆಹಲಿ ವಿಶ್ವವಿದ್ಯಾಲಯ (11.93)-3.
- 400 ಮೀ. ಹರ್ಡಲ್ಸ್: ಡೆಲ್ನಾ ಫಿಲಿಪ್, ಕೇರಳದ ಕ್ಯಾಲಿಕಟ್ ವಿ.ವಿ (1:00.12)-1, ದೀಕ್ಷಿತಾ ರಾಮ ಗೌಡ, ಮಂಗಳೂರು ವಿ.ವಿ. (1:00:96)-2, ಮೇಘಾ ಮುನ್ನವಲ್ಲಿಮಠ, ಧಾರವಾಡ ವಿ.ವಿ. (1:01.64)
- 20 ಕಿ.ಮೀ. ನಡಿಗೆ: ಗಯಾತ್ ಗಣೇಶ್ ಚೌಧರಿ, ಪುಣೆ ಸಾವಿತ್ರಿಬಾಯಿ ಫುಲೆ ವಿ.ವಿ. (1:40:15.41)-1, ಬಲ್ಜೀತ್ ಕೌರ್, ಪಂಜಾಬ್ ತಾಲ್ವಾಂಡಿ ಸಾಬೋ ಬಾತಿನ್ ವಿ.ವಿ.(1:41:37.12)-2, ನಿಖಿತಾ ಲಾಂಬಾ, ಚಂಡೀಗಢ ವಿ.ವಿ.(1:43:54.43)-3
- 800 ಮೀ. ಓಟ: ಅಂಜು, ಪಂಜಾಬ್ ಲವ್ಲೀ ಪ್ರೊಫೆಸನಲ್ ವಿ.ವಿ.(2:08.43) -1, ಅಂಜಲಿ, ಅಮೃತಸರ ಗುರುನಾನಕ್ ದೇವ್ ವಿ.ವಿ.(2:09.50)-2, ಲಕ್ಷ್ಮೀ ಪ್ರಿಯಾ ಕಿಸನ್, ಭುವನೇಶ್ವರ ಕೆಐಐಟಿ ವಿ.ವಿ.(2:10.59)-3.
- ಟ್ರಿಪಲ್ ಜಂಪ್: ಅಲೀನಾ ಟಿ. ಸಾಜಿ, ಕೊಟ್ಟಾಯಂ ಎಂ.ಜಿ. ವಿ.ವಿ. (12.79ಮೀ.)-1, ಸಾಧನಾ ರವಿ, ತಮಿಳುನಾಡು ಎಸ್.ಆರ್.ಎಂ. ಇನ್‌ಸ್ಟಿಟ್ಯೂಟ್ ಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (12.74ಮೀ.)-2, ಪ್ರೀತಿ, ಬಿಕನೇರ್ ಮಹಾರಾಜ ಗಂಗಾ ಸಿಂಗ್ ವಿ.ವಿ. (12.52ಮೀ.)-3
- ಡಿಸ್ಕಸ್ ಥ್ರೋ: ಸಾನಿಯಾ ಯಾದವ್, ಪಂಜಾಬ್ ತಾಲ್ವಾಂಡಿ ಸಾಬೊ (53.45ಮೀ.)-1, ಪ್ರಿಯಾ, ಮೊಹಾಲಿ ಚಂಡೀಗಢ ವಿ.ವಿ (51.95 ಮೀ.)-2, ಉಜ್ವಲ್ ಖಾಸನಾ, ಅಮೃತಸರ ಗುರುನಾನಕ್ ದೇವ್ ವಿ.ವಿ.(49.57ಮೀ.)
ನಶಾಮುಕ್ತ ಭಾರತ: ಬೃಹತ್ ವಾಕಥಾನ್- ಅಂಗಾಂಗ ದಾನ- ವ್ಯಸನ ಮುಕ್ತ ಸಂದೇಶ ಸಾರಿದ ಯುವಜನತೆ
ದುಶ್ಚಟಗಳಿಂದ ಯುವಜನತೆ ರಕ್ಷಣೆ- ನಮ್ಮ ಹೊಣೆ: ಡಾ. ಭಗವಾನ್
ಮೂಡುಬಿದಿರೆ: ‘ಇಂದಿನ ಯುವಜನತೆಯನ್ನು ದುಶ್ಚಟಗಳಿಂದ ರಕ್ಷಿಸುವುದು ನಮ್ಮ ಆಯ್ಕೆ ಅಲ್ಲ. ಅನಿವಾರ್ಯತೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಭಗವಾನ್ ಹೇಳಿದರು.
85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಂಗವಾಗಿ ವಿಶ್ವವಿದ್ಯಾಲಯವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ‘ನಶಾಮುಕ್ತ ಭಾರತ ಅಭಿಯಾನ ಮತ್ತು ಅಂಗಾಂಗ ದಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಯುವಜನತೆಯನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ದಿಶಾ ಬೋಧ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದರು.
‘ಮಾದಕ ದ್ರವ್ಯ ವ್ಯಸನವು ಖಿನ್ನತೆಗೆ ತಳ್ಳುತ್ತದೆ. ಆರೋಗ್ಯದ ಜೊತೆ ಬದುಕನ್ನು ಕೆಡವುತ್ತದೆ’ ಎಂದ ಅವರು, ‘ಸಶಕ್ತೀಕರಣಕ್ಕಾಗಿ ಸ್ವಾಮಿ ವಿವೇಕಾನಂದ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿ’ ಎಂದರು.
ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಅನಂತರ ಚೌಟರ ಅರಮನೆಯ ರಾಣಿ ಅಬ್ಬಕ್ಕ ಪ್ರತಿಮೆಯ ವೃತ್ತದಿಂದ ಸ್ವರಾಜ್ ಮೈದಾನದ ವರೆಗೆ ವಾಕಥಾನ್ ಸಾಗಿ ಬಂತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಕಾಥಾನ್‌ನಲ್ಲಿ ಪಾಲ್ಗೊಂಡರು. ಕುಲಪತಿ ಡಾ.ಭಗವಾನ್ ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಇಫ್ತೀಕರ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್, ಶ್ರೀಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಮಾಜದ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ವಿ.ವಿ. ಕುಲಸಚಿವ ಅರ್ಜುನ್ ಒಡೆಯರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ, ದಿಶಾಬೋಧ ಪ್ರತಿಷ್ಠಾನದ ಶಿವಾಂಗಿ ರೆಡ್ಡಿ ಮತ್ತು ಜೀತು ಥಾಮಸ್ ಮತ್ತಿತರರು ಇದ್ದರು.
‘ಮಾದಕ ವ್ಯಸನಕ್ಕೆ ಇಲ್ಲ ಹೇಳಿ, ಬದುಕಿಗೆ ಹೌದು ಎನ್ನಿ’ ಎಂಬ ಘೋಷವಾಕ್ಯದ ಜೊತೆ ಕಾರ್ಯಕ್ರಮ ಸಂಪನ್ನಗೊಂಡಿತು.
