ಮಂಗಳೂರು: ಸೌಜನ್ಯಾ ಹೆಸರಿನಲ್ಲಿ ಹೆಲ್ಪ್‌ಲೈನ್ ತೆರೆದು ವಂಚನೆ- ಬೆಂಗಳೂರು ಮಹಿಳೆಯ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್ಐಆರ್

ಮಂಗಳೂರು: ಸೌಜನ್ಯಾ ಹೆಸರಿನಲ್ಲಿ ಹೆಲ್ಪ್‌ಲೈನ್ ತೆರೆದು ವಂಚನೆಗೈದಿರುವ ಆರೋಪದಲ್ಲಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬ ಮಹಿಳೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‌ನ ಮಾಲಾಡಿ ನಿವಾಸಿ ರಾಜೇಶ್ ಕೆ. ಎಂಬವರು ನೀಡಿರುವ ದೂರಿನ‌ ಹಿನ್ನೆಲೆ ಈ ಪ್ರಕರಣ ದಾಖಲಾಗಿದೆ‌.

ವೃತ್ತಿಯಲ್ಲಿ ಗಾಯಕರಾಗಿರುವ ರಾಜೇಶ್ ಅವರು Arvind vivek ಎಂಬ ಹೆಸರಿನಲ್ಲಿ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. 2024ರಲ್ಲಿ ಇವರಿಗೆ ಫೇಸ್ಬುಕ್ ಮೂಲಕ ಸಂಧ್ಯಾ ಪವಿತ್ರ ನಾಗರಾಜ್ ಪರಿಚಯವಾಗಿದ್ದಾಳೆ. ಆಗ ತನ್ನನ್ನು ಆಕೆ ಸಾಮಾಜಿಕ ಹೋರಾಟಗಾರ್ತಿ ಎಂದು ನಂಬಿಸಿದ್ದಳು. Helpline ಹೆಸರಿನಲ್ಲಿ ನೊಂದವರಿಗೆ, ವಂಚನೆಗೊಳಪಟ್ಟವರಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿದ್ದಳು. ರಾಜ್ಯದಲ್ಲಿ ಅಮಾಯಕರ ಮೇಲೆ ದಾಖಲಾಗಿದ್ದ ಅನೇಕ ಪ್ರಕರಣ ಬಗೆಹರಿಸಿಕೊಟ್ಟಿರುವುದಾಗಿ ಹೇಳಿದ್ದಳು.

ಈ ವೇಳೆ ಬಂಟ್ವಾಳ‌ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ರಾಜೇಶ್ ಆಕೆಗೆ ತಿಳಿಸಿದ್ದರು. ಈ ಪ್ರಕರಣವನ್ನು‌ ಹೈಕೋರ್ಟ್‌ನಲ್ಲಿ ಬಗೆಹರಿಸುವುದಾಗಿ ಸಂಧ್ಯಾ ನಂಬಿಸಿದ್ದಾಳೆ. ಕೇಸ್ ದಾಖಲಾತಿ ಪಡೆಯಲು 2025ರ ಜನವರಿಯಲ್ಲಿ ಬೆಂಗಳೂರಿನ ಜೆ.ಪಿ‌.ನಗರದ ಮನೆಗೆ ಕರೆಸಿ, ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚು ಇದೆ ಎಂದಿದ್ದಳು. ಅದರಂತೆ ದೂರುದಾರ ರಾಜೇಶ್‌ರಿಂದ ಹಂತಹಂತವಾಗಿ 3.20 ಲಕ್ಷ ಹಣ ಪಡೆದಿದ್ದಳು.

ಆದರೆ ಹಣ ನೀಡಿದ ಬಳಿಕವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಆಕೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಇದರಿಂದ ಸಂಶಯಗೊಂಡು
ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯನ್ನು ಕೇಳಿದ್ದಾರೆ‌. ಇದರಿಂದ ಕೋಪಗೊಂಡ ಸಂಧ್ಯಾ ಮನೆಗೆ ಹೆಂಗಸರನ್ನು ಕರೆದುಕೊಂಡು ಬಂದು ಜಗಳ ಮಾಡೋದಾಗಿ, ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ಆದ್ದರಿಂದ ಈ ಬಗ್ಗೆ ರಾಜೇಶ್ ಪೊಲೀಸ್ ದೂರು ನೀಡಿದ್ದಾರೆ. ದೂರಿನ‌ ಹಿನ್ನೆಲೆಯಲ್ಲಿ BNS ಕಾಯ್ದೆಯಡಿ 318(4), 351(2) ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu