ಆಂಧ್ರಪ್ರದೇಶ: ಮಹಿಳೆಯೊಬ್ಬರು ಬೆಳಗ್ಗೆ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಅದೇ ದಿನ ಸಂಜೆ ಆಕೆಯ ಮೊದಲ ಮಗು ಮೃತಪಟ್ಟ ದುರಂತವೊಂದು ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸತ್ಯಸಾಯಿ ಜಿಲ್ಲೆಯ ಚೆನ್ನೆಕೊಥಪಲ್ಲಿ ಮಂಡಲದ ಪ್ಯಾಡಿಂಡಿಯ ದಂಪತಿಯಾದ ಪ್ರಸಾದ್ ಮತ್ತು ಅಂಜಲಿ 10ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಸಾದ್ ಮತ್ತು ಅಂಜಲಿ ದಂಪತಿಗೆ 8 ವರ್ಷದ ದಿಲೀಪ್ ಪುತ್ರನಿದ್ದಾನೆ. ಪ್ರಸಾದ್ ಅವರ ಪತ್ನಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅಜ್ಜಿ ಬಟ್ಟೆ ಒಗೆಯಲು ಕೊಳಕ್ಕೆ ಹೋದಾಗ, ಅವರನ್ನು ಹಿಂಬಾಲಿಸಿದ ದಿಲೀಪ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮಗುವಿಗೆ ಜನ್ಮ ನೀಡಿದ ಸಂತೋಷದಲ್ಲಿದ್ದ ದಂಪತಿಗೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಅವರ ಮೊದಲ ಪುತ್ರ ದಿಲೀಪ್ ಕೊಳದಲ್ಲಿ ಸಾವನ್ನಪ್ಪಿದ್ದು ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಎರಡನೇ ಮಗು ಬೆಳಗ್ಗೆ ಜನಿಸಿ ಸಂತೋಷದಲ್ಲಿದ್ದಾಗಲೇ ಮೊದಲ ಮಗು ಸಂಜೆ ಸಾವನ್ನಪ್ಪಿದ್ದು ಕುಟುಂಬದಲ್ಲಿ ತೀವ್ರ ದುಃಖ ಮೂಡಿಸಿದೆ.