ಮಂಗಳೂರು: ಲಂಚ ಸ್ವೀಕರಿಸುತ್ತಿದಾಗಲೇ ಗಣಿ ಇಲಾಖೆ ಭ್ರಷ್ಟ ಅಧಿಕಾರಿ ಕೃಷ್ಣವೇಣಿ ಸಹಿತ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಮಂಗಳೂರು: ಮನೆ ಕಟ್ಟುವ ಉದ್ದೇಶದಿಂದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ಪಡೆಯಲು ಬಂದವರಿಂದ 50ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಹಾಗೂ ಇಬ್ಬರು ಸಿಬ್ಬಂದಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದೂರುದಾರರು ತಮ್ಮ ಹೆಸರಿಗೆ ಜಿ.ಪಿ.ಎ. ಆಗಿರುವ ತಮ್ಮ ಪರಿಚಯದವರ ಹೆಸರಿನಲ್ಲಿರುವ ಉಳ್ಳಾಲದ ಇರಾ ಗ್ರಾಮದ ಸರ್ವೆ ನಂಬ್ರ 279/5 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟಲು ಉದ್ದೇಶಿಸಿದ್ದರು. ಆದ್ದರಿಂದ ಅಲ್ಲಿದ್ದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿಗೆ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೆ.28ರಂದು ಅರ್ಜಿಯನ್ನು ಸಲ್ಲಿಸಿದ್ದರು. ಉಳ್ಳಾಲ ತಹಶೀಲ್ದಾರ್ ಆ  ಜಮೀನಿನಲ್ಲಿರುವ ಕಟ್ಟಡ ಸಮತಟ್ಟು ಮಾಡಲು  ದೃಢಿಕರಣ ಪತ್ರ ನೀಡಬಹುದು ಎಂದು ಮಾ. 21 ರಂದು ವರದಿ ಸಲ್ಲಿಸಿದ್ದರು. ಆದರೂ ಗಣಿ ಇಲಾಖೆಯಿಂದ ಅನುಮತಿ ದೊರಕಿರಲಿಲ್ಲ.

ಈ ಅರ್ಜಿಯ ಬಗ್ಗೆ ವಿಚಾರಿಸಲು ದೂರುದಾರರು ಮಂಗಳೂರು ಗಣಿ ಇಲಾಖೆ ಕಚೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕಿ ಕೃಷ್ಣವೇಣಿ, ಕಚೇರಿ ಸಿಬ್ಬಂದಿ ಪ್ರದೀಪ್‌ನನ್ನು ಕರೆಯಿಸಿ ಫೈಲಿಗೆ 50,000 ರೂ. ತಗೊಳ್ಳಿ, ಬಳಿಕ ಮಾಡುವ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ರವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬುಧವಾರ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ತನ್ನ ಕಾರು ಚಾಲಕ ಮಧು ಎಂಬವರ ಮೂಲಕ 50,000 ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಅಧಿಕಾರಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu