ಕಾಲೇಜು ಆವರಣದಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಕಿತ್ಕೊಂಡ ಉಪನ್ಯಾಸಕಿಗೆ ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ


ಆಂಧ್ರಪದೇಶ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಹಾಡು ಶಿಷ್ಯರು ಗುರುವಿನೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ‌. ಇಂದು ಇದು ವಿದ್ಯಾರ್ಥಿಗಳಲ್ಲಿ ಸಂಪೂರ್ಣ ಕಣ್ಮರೆಯಾಗಿದೆ. ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸುವ ಮೂಲಕ ಜೀವನದಲ್ಲಿ ಹಾದಿ ತಪ್ಪುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಈ ಘಟನೆ.

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂತಹದ್ದೊಂದು ಘಟನೆಯೊಂದು ನಡೆದಿದೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಮಹಿಳಾ ಉಪನ್ಯಾಸಕಿಯೊಬ್ಬರು ವಿದ್ಯಾರ್ಥಿನಿಯನ್ನು ತಡೆದು, ಆಕೆಯಿಂದ ಫೋನ್ ಕಸಿದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿನಿ, ಉಪನ್ಯಾಸಕಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ.

ಫೋನ್ ಕೊಡುವಂತೆ ಉಪನ್ಯಾಸಕಿಯನ್ನು ಕಿರುಚಾಡಿದ ವಿದ್ಯಾರ್ಥಿನಿ, ಬಾಯಿಗೆ ಬಂದಂತೆ ನಿಂದಿಸಿದ್ದಾಳೆ. ಆದರೆ ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದ್ದಾರೆ. ಆಗ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಕಳಚಿದ ವಿದ್ಯಾರ್ಥಿನಿ, ಉಪನ್ಯಾಸಕಿಗೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಉಪನ್ಯಾಸಕಿ ಕೂಡ ಆಕೆಯ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ.

ಆಗ ಅಲ್ಲಿದ್ದವರು ಮಧ್ಯಪ್ರವೇಶಿಸಿ ಜಗಳವನ್ನು ತಡೆದಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ವಿದ್ಯಾರ್ಥಿಯೊಬ್ಬ ವೀಡಿಯೋ ಚಿತ್ರೀಕರಿಸಿದ್ದಾನೆ. ಈ ವೀಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ನೆಟ್ಟಿಗರು ಮಾತ್ರ ವಿದ್ಯಾರ್ಥಿನಿಯ ನಡೆಗೆ ಟೀಕಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu