ಗರುಡ ಗ್ಯಾಂಗ್ ಸದಸ್ಯ ಇಸಾಕ್ ಅರೆಸ್ಟ್‌ಗೆ ಪೊಲೀಸ್ ಕಾರ್ಯಾಚರಣೆ- ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಕಾರು ಬಿಟ್ಟು ಪರಾರಿಯಾದ ಆರೋಪಿ


ಮಣಿಪಾಲ: ಮಣಿಪಾಲದಲ್ಲಿ ಮಂಗಳವಾರ ತಡರಾತ್ರಿ ಪೊಲೀಸ್ ಕಾರ್ಯಾಚರಣೆ ವೇಳೆ ಗರುಡ ಗ್ಯಾಂಗ್‌ನ ಸದಸ್ಯ ಇಸಾಕ್, ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ತನ್ನ ಕಾರು ಬಿಟ್ಟು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಆತನ ಗೆಳತಿಯನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರ ಆರೋಪಿ, ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮಣಿಪಾಲದಲ್ಲಿರುವ ಮಾಹಿತಿ ನೆಲಮಂಗಲ ಪೊಲೀಸರಿಗೆ ದೊರೆತಿತ್ತು. ಅದರಂತೆ ನೆಲಮಂಗಲ ಪೊಲೀಸರು ಕಾರ್ಯಾಚರಣೆಗೆಂದು ಮಣಿಪಾಲಕ್ಕೆ ಬಂದಿಳಿದಿದ್ದರು.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ತನ್ನ ಗೆಳತಿಯೊಂದಿಗೆ ಕಾರಿನಲ್ಲಿದ್ದ ಇಸಾಕ್‌ನನ್ನು ನೆಲಮಂಗಲ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಆತ ತನ್ನ ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ರಸ್ತೆ ಬದಿಯಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು, ಪರಾರಿಯಾಗಿದ್ದಾನೆ. ಇದೇ ವೇಳೆ ನೆಲಮಂಗಲ ಪೊಲೀಸರು ಸ್ಥಳೀಯ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದರು.


ಎರಡು ಕಡೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಇಸಾಕ್ ಕಾರನ್ನು ಬೆಂಬಿಡದೆ ಚೇಸ್ ಮಾಡಿದ್ದಾರೆ. ಆಗ ಮಣ್ಣಪಳ್ಳದ ಬಳಿ ಇಸಾಕ್ ಕಾರು ಟಯರ್ ಪಂಚ‌ರ್ ಆಗಿದ್ದು, ಆತ ಅಲ್ಲೇ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಆತನ ಗೆಳತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆ ವೇಳೆ ಪೊಲೀಸ್ ಜೀಪು ಸಹಿತ ಸಾರ್ವಜನಿಕರ ಕೆಲವು ವಾಹನಗಳು ಜಖಂಗೊಂಡಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾರಿನಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಆಕೆಯನ್ನು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ತಲೆಮರೆಸಿಕೊಂಡಿರುವ ಇಸಾಕ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ.