ಮಂಗಳೂರು: ದೇರಳಕಟ್ಟೆ ಮುತ್ತೂಟ್ ಫೈನಾನ್ಸ್ ದರೋಡೆಗೆ ಬೀಗ ಮುರಿಯುತ್ತಿದ್ದಾಗಲೇ ಮೊಳಗಿತು ಸೈರನ್, ಇಬ್ಬರು ದರೋಡೆಕೋರರು ಅಂದರ್


ಉಳ್ಳಾಲ: ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಬೀಗ ಮುರಿದು ದರೋಡೆಗೆ ಯತ್ನಿಸುತ್ತಿದ್ದಾಗಲೇ ಸೈರನ್ ಮೊಳಗಿದ ಪರಿಣಾಮ ಇಬ್ಬರು ಕೇರಳ ಮೂಲದ ದರೋಡೆಕೋರರು ಲಾಕ್ ಆಗಿ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಕೇರಳ ರಾಜ್ಯದ ಕಾಂಞಂಗಾಡ್ ನಿವಾಸಿ ಮುರಳಿ ಹಾಗೂ ಕಾಸರಗೋಡು ನಿವಾಸಿ ಹರ್ಷದ್ ಕಟ್ಟಡದಲ್ಲಿ ಲಾಕ್ ಆಗಿ ಬಂಧಿತ‌ ಆರೋಪಿಗಳು. ಮತ್ತೋರ್ವ ಪರಾರಿ ಆಗಿದ್ದಾನೆ.

ಶನಿವಾರ ತಡರಾತ್ರಿ ಸುಮಾರು 1.30ಗಂಟೆ ಸುಮಾರಿಗೆ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಕಟ್ಟಡ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿದ್ದ ಮುತ್ತೂಟ್ ಫೈನಾನ್ಸ್‌ಗೆ ಕೇರಳ ಮೂಲದ ಮೂವರು ದರೋಡೆಕೋರರು ಕನ್ನ ಹಾಕಿದ್ದಾರೆ. ಇನ್ನೇನು ಫೈನಾನ್ಸ್ ಬೀಗ ಮುರಿದು, ಸಿಸಿ ಕ್ಯಾಮರಾವನ್ನು ಒಡೆದು ಹಾಕುತ್ತಿದ್ದಂತೆ ಸೈರನ್ ಮೊಳಗಿದೆ. ಇದರಿಂದ ಮುತ್ತೂಟ್ ಫೈನಾನ್ಸ್‌ನ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದೆ. ತಕ್ಷಣ ಫೈನಾನ್ಸ್ ಸಂಸ್ಥೆಯ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಬೆದರಿದ ದರೋಡೆಕೋರರಲ್ಲಿ ಓರ್ವನು ಕಟ್ಟಡದ ಮೇಲಿನಿಂದ ಹಾರಿದ್ದಾನೆ‌. ಈ ವೇಳೆ ಪೊಲೀಸರು ಹಾಗೂ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಮತ್ತೋರ್ವನು ಕಟ್ಟಡದಲ್ಲಿ ಅಡಗಿ ಕುಳಿತು ಸಿಕ್ಕಿಬಿದ್ದಿದ್ದಾನೆ. ಇನ್ನೋರ್ವನು ತಪ್ಪಿಸಿ ಪರಾರಿಯಾಗಿದ್ದಾನೆ. ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನ್‌ ಅನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಈ ಜನವರಿಯಲ್ಲಿ ಕೆ.ಸಿ.ರೋಡಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ದರೋಡೆಯು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ನಡೆಯಲಿದ್ದ ಸಂಭವನೀಯ ದರೋಡೆ ಪ್ರಕರಣವನ್ನು ಪೊಲೀಸರು ತಪ್ಪಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu