ಸುಳ್ಯ: ನಾಯಿ ಕಡಿತಕ್ಕೊಳಗಾಗಿದ್ದ ಮಹಿಳೆ ಮೃತ್ಯು




ಸುಳ್ಯ: ನಾಯಿ ಕಡಿತಕ್ಕೊಳಗಾಗಿದ್ದ ಮಹಿಳೆಯೋರ್ವರು ರೇಬಿಸ್ ರೋಗದಿಂದ ಮೃತಪಟ್ಟಿರುವ ಘಟನೆ ಸುಳ್ಯದ ಸಂಪಾಜೆಯಲ್ಲಿ ಸಂಭವಿಸಿದೆ.

ಸಂಪಾಜೆಯ ಕಲ್ಲುಗುಂಡಿ ಬಳಿಯ 42 ವರ್ಷದ ಮಹಿಳೆ ಫೆ.7ರಂದು ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದರು. ಆಗ ಅವರಿಗೆ ನಾಯಿಮರಿಯೊಂದು ಕಚ್ಚಿತ್ತು. ಆದರೆ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಹಾಗೂ ಚಿಕಿತ್ಸೆಯನ್ನೂ ಪಡೆದಿರಲಿಲ್ಲ ಎನ್ನಲಾಗಿದೆ. ಸೋಮವಾರ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದ್ದರಿಂದ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ ತೋರುತ್ತಿದ್ದ ಆಕೆಯೊಂದಿಗೆ ವೈದ್ಯರು ಪೂರಕ ಮಾಹಿತಿ ಕೇಳಿದಾಗ ನಾಯಿ ಕಚ್ಚಿದ್ದ ಬಗ್ಗೆ ತಿಳಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾ.20ರಂದು ಮೃತಪಟ್ಟಿದ್ದಾರೆ.

ಆಕೆ ರೇಬಿಸ್ ಕಾಯಿಲೆಗೆ ತುತ್ತಾಗಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಪರಿಸರದ ಹಲವರಿಗೆ ಹಾಗೂ ಮನೆಯವರಿಗೆ ಎಆರ್‌ವಿ ಲಸಿಕೆ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್ ತಿಳಿಸಿದ್ದಾರೆ. ಮೃತ ಮಹಿಳೆ ಪತಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಹಿಳೆಗೆ ಕಚ್ಚಿರುವ ನಾಯಿಮರಿ ಅರಂತೋಡಿನಲ್ಲಿ ಇನ್ನೂ ಕೆಲವರಿಗೆ ಕಚ್ಚಿದೆ ಎನ್ನಲಾಗುತ್ತಿದೆ. ನಾಯಿ ಕಡಿತಕ್ಕೊಳಗಾದವರು ಸೂಕ್ತ ಲಸಿಕೆ ಪಡೆದುಕೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗಳು ವಿನಂತಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu