ನಟ ಸೈಫ್ ಅಲಿ ಖಾನ್‌ ಮೇಲೆ ದಾಳಿಯಾಗಿದ್ದೇ ಅನುಮಾನ- ಕಸಕ್ಕೆ ಹೋಲಿಸಿದ ಸಚಿವ ನಿತೀಶ್ ರಾಣೆ


ಮುಂಬೈ: ನಟ ಸೈಫ್ ಅಲಿ ಖಾನ್‌ರಿಗೆ ನಿಜವಾಗಿಯೂ ಚಾಕು ಇರಿಯಲಾಗಿದೆಯೇ ಅಥವಾ ಆತ ನಟನೆ ಮಾಡುತ್ತಿದ್ದಾರೆಯೇ ಎನ್ನುವುದರ ಬಗ್ಗೆ ಅನುಮಾನವಿದೆ' ಎಂದು ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯ ಬಾಂಗ್ಲಾದೇಶಿಯಿಂದ ಚಾಕು ಇರಿತಕ್ಕೆ ಒಳಗಾದ ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳುವ ವೇಳೆ ಸೈಫ್ ಆರಾಮವಾಗಿ ನಡೆದುಕೊಂಡು ಬಂದಿದ್ದು ಕಂಡುಬಂತು.

ಈ ಬಗ್ಗೆ ಗುರುವಾರ ಮಾತನಾಡಿರುವ ನಿತೀಶ್ ರಾಣೆ, 'ಸೈಫ್ ಆಸ್ಪತ್ರೆಯಿಂದ ಹೊರಗೆ ಬರುತ್ತಿರುವುದು ನೋಡಿದೆ. ಅವರು ನಿಜವಾಗಿಯೂ ಇರಿತಕ್ಕೆ ಒಳಗಾಗಿದ್ದಾರೆಯೇ ಅಥವಾ ನಟನೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಅನುಮಾನ ಮೂಡುತ್ತದೆ. ನಡೆಯುವಾಗ ಅವರು ಡಾನ್ಸ್ ಮಾಡುತ್ತಿದ್ದರು' ಎಂದರು.

ಇನ್ನು ಸೈಫ್‌ರನ್ನು ಕಸಕ್ಕೆ ಹೋಲಿಸಿರುವ ನಿತೀಶ್ ರಾಣೆ, 'ಇದಕ್ಕಿಂತ ಮೊದಲು ಬೀದಿಯಲ್ಲಿದ್ದ ಬಾಂಗ್ಲನ್ನರು ಈಗ ಸೈಫ್ ಮನೆಗೆ ನುಗ್ಗಿದ್ದಾರೆ. ಅವನು ಅವರನ್ನು (ಸೈಫ್) ಕರೆದೊಯ್ಯಲು ಬಂದಿರಬಹುದು. ಅದು ಒಳ್ಳೆಯದು. ಕಸವನ್ನು (ಸೈಫ್) ತೆಗೆದುಕೊಂಡೇ ಹೋಗಲಿ' ಎಂದರು.

ಆಧುನಿಕ ವೈದ್ಯ ಪದ್ಧತಿಯಲ್ಲಿ ಬೇಗ ಗುಣ ಸಾಧ್ಯ: ನಟ ಸೈಫ್‌ ಅಲಿ ಖಾನ್‌ ಮೇಲೆ ಭಾರಿ ಪ್ರಮಾಣದ ಚಾಕು ದಾಳಿಯಾಗಿದ್ದರೂ, ಅವರು ಡಿಸ್ಚಾರ್ಜ್‌ ಆದ ಬಳಿಕ ಆರಾಮವಾಗಿ ನಡೆದು ಬಂದಿದ್ದು ಅಚ್ಚರಿ ಹಾಗೂ ಸಂದೇಹಗಳನ್ನು ಮೂಡಿಸಿದೆ. ಆದರೆ ಇದರ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದು, ‘ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಿಂದ ಬೇಗ ಗುಣಮುಖ ಆಗುವುದು ಸಾಧ್ಯವಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿ ವೈದ್ಯ ದೀಪಕ್‌ ಕೃಷ್ಣಸ್ವಾಮಿ ಟ್ವೀಟ್ ಮಾಡಿ, ‘ಸೈಫ್‌ಗೆ ಸೆರೆಬ್ರೊಸ್ಪೈನಲ್ ದ್ರವದ ಸೋರಿಕೆ ಮತ್ತು ಡ್ಯೂರಮೇಟರ್‌ನಲ್ಲಿ (ಬೆನ್ನು ಮೂಳೆ ಹಾಗೂ ಮಿದುಳು ರಕ್ಷಿಸುವ ಪೊರೆ) ಹರಿದಿತ್ತು, 


ಅದನ್ನು ಸರಿಪಡಿಸಲಾಯಿತು. ಆಧುನಿಕ ವೈದ್ಯ ಪದ್ಧತಿಯಲ್ಲಿ ಇದನ್ನು ಬೇಗ ಗುಣಪಡಿಸಲು ಸಾಧ್ಯವಿದೆ. ಹೃದಯದ ಬೈಪಾಸ್‌ ಸರ್ಜರಿ ಆದವರೂ 3-4 ದಿನದಲ್ಲಿ ಆರಾಮವಾಗಿ ಮೆಟ್ಟಿಲು ಹತ್ತಿ ಇಳಿಯಬಹುದು. ಆಧುನಿಕ ವೈದ್ಯ ಪದ್ಧತಿ ಅರಿಯಿರಿ. ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಹರಡುವಿಕೆ ನಿಲ್ಲಿಸಿ’ ಎಂದಿದ್ದಾರೆ. ಅಲ್ಲದೆ ತಮ್ಮ 78 ವರ್ಷದ ತಾಯಿ 2022ರಲ್ಲಿ ಕಾಲು ಮುರಿತದ ಸರ್ಜರಿಗೆ ಒಳಗಾದರೂ, ಸಂಜೆಯೇ ನಡೆದಾಡಿದ್ದನ್ನು ಅವರು ಉಲ್ಲೇಖಿಸಿದ್ದಾರೆ.


ಸೈಫ್‌ ಕರೆತಂದಿದ್ದು ಸ್ನೇಹಿತ ಜೈದಿ: ನಟ ಸೈಫ್‌ ಅಲಿ ಖಾನ್‌ ಅವರ ದೇಹದಲ್ಲಿ 5 ಕಡೆಗಳಲ್ಲಿ ಗಾಯಗಳಾಗಿದ್ದವು ಎಂದು ತನ್ನ ವರದಿಯಲ್ಲಿ ಹೇಳಿರುವ ಲೀಲಾವತಿ ಆಸ್ಪತ್ರೆ, ಅವರನ್ನು ಸ್ನೇಹಿತ ಅಫ್ಸರ್‌ ಜೈದಿ ಅಬರಿ ಆಟೋರಿಕ್ಷಾದಲ್ಲಿ ಕರೆತಂದಿದ್ದರು ಎಂದಿದೆ. ಆಗ ಸೈಫ್‌ ಕಿರಿಯ ಮಗ ತೈಮೂರ್‌, ಅವರನ್ನು ಆಸ್ಪತ್ರೆಗೆ ಕರೆತಂದಿದ್ದ ಎಂಬ ವರದಿಗಳನ್ನು ಪರೋಕ್ಷವಾಗಿ ತಳ್ಳಿಹಾಕಿದೆ. ಗುರುವಾರ ರಾತ್ರಿ ವೈದ್ಯಕೀಯ ವರದಿ ವರದಿ ಬಿಡುಡೆ ಮಾಡಿರುವ ಆಸ್ಪತ್ರೆ, ‘ಸೈಫ್‌ ಬೆನ್ನು, ಮಣಿಕಟ್ಟು, ಕುತ್ತಿಗೆ, ಭುಜ ಮತ್ತು ಮೊಣಕೈಯಲ್ಲಿ 5 ಸ್ಥಳಗಳಲ್ಲಿ ಇರಿಯಲಾಗಿತ್ತು ಮತ್ತು ಅವರ ಸ್ನೇಹಿತ ಅಫ್ಸರ್ ಜೈದಿ ಅವರು ಆಟೋರಿಕ್ಷಾದಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆತಂದರು’ ಎಂದಿದೆ.