ದಲಿತ ಯುವಕನ ಕೈ ಕಡಿದ ಆರೋಪಿಗಳ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು


ರಾಮನಗರ: ಮೂರು ದಿನಗಳ ಹಿಂದೆ ಕನಕಪುರ ತಾಲ್ಲೂಕಿನ ಮಳಗಾಳು ಗ್ರಾಮದಲ್ಲಿ ದಲಿತರಿಗೆ ಹಲ್ಲೆಗೈದು  ಓರ್ವ ಯುವಕನ ಕೈಕಡಿದಿರುವ ಪ್ರಕರಣದ ಆರೋಪಿಗಳನ್ನು ಪೊಲೀಸರು ರವಿವಾರ ಬೆಳಗ್ಗೆ ಗುಂಡೇಟು ಹಾಕಿ ಬಂಧಿಸಿರುವ ಘಟನೆ ಕಗ್ಗಲಿಪುರ ಬಳಿಯ ವ್ಯಾಲಿ ಸ್ಕೂಲ್ ರಸ್ತೆ ಬಳಿ ನಡೆದಿದೆ.

ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಬಂಧಿತ ಆರೋಪಿಗಳು. 

ಕೃತ್ಯ ಎಸಗಿದ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳು, ಕಗ್ಗಲಿಪುರ ಬಳಿಯ ವ್ಯಾಲಿ ಸ್ಕೂಲ್ ರಸ್ತೆ ಬಳಿ ತಿರುಗಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ರವಿವಾರ ಮುಂಜಾನೆ 5ಗಂಟೆ ಸುಮಾರಿಗೆ ಕನಕಪುರ ಟೌನ್ ಠಾಣೆ ಇನ್‌ಸ್ಪೆಕ್ಟರ್ ಮಿಥುನ್ ಶಿಲ್ಪಿ, ಗ್ರಾಮಾಂತರ ಇನ್‌ಸ್ಪೆಕ್ಟ‌ರ್ ಕೃಷ್ಣ ಲಮಾಣಿ, ಪಿಎಸ್‌ಐಗಳಾದ ಮನೋಹ‌ರ್, ರವಿಕುಮಾ‌ರ್, ಕಾನ್‌ಸ್ಟೆಬಲ್‌ಗಳಾದ ರಾಜಶೇಖರ್ ಹಾಗೂ ಶಿವಕುಮಾ‌ರ್ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೋಲಿಸರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಹರ್ಷ ಮತ್ತು ಕರುಣೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳ ವಿರುದ್ಧ ಕನಕಪುರ ಟೌನ್, ಗ್ರಾಮಾಂತರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ಪರಿಶಿಷ್ಟರ ಮೇಲೆ ದೌರ್ಜನ್ಯ ಸೇರಿದಂತೆ ಐದು ಪ್ರಕರಣಗಳಿವೆ. ಆಸ್ಪತ್ರೆಯಲ್ಲಿರುವ ಆರೋಪಿಗಳು ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುವುದು. ಕೃತ್ಯದಲ್ಲಿ ಒಟ್ಟು 7 ಮಂದಿ ಭಾಗಿಯಾಗಿದ್ದು, ಘಟನೆ ನಡೆದ ಮಾರನೇ ದಿನವೇ ಐವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu