ಮಂಗಳೂರು: ತಿರುವನಂತಪುರ- ಕಾಸರಗೋಡುವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರಿಗೆ ವಿಸ್ತರಣೆ
Thursday, February 22, 2024
ಮಂಗಳೂರು: ಕೇರಳದ ತಿರುವನಂತಪುರ- ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ದ.ಕ.ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರ ಮನವಿಯ ಮೇರೆಗೆ ಮಂಗಳೂರಿಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಬುಧವಾರ ರೈಲ್ವೇ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ.
ಇದರನ್ವಯ ವಂದೇ ಭಾರತ್ ರೈಲು ನಂ. 20632/20631 ಇನ್ನು ಮುಂದೆ ತಿರುವನಂತಪುರ- ಮಂಗಳೂರು ನಡುವೆ ಸಂಚಾರ ನಡೆಸಲಿದೆ. ಅದರಂತೆ ನೂತನ ರೈಲ್ವೇ ವೇಳಾಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಅಪರಾಹ್ನ 3.05 ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05ಕ್ಕೆ ಮರಳಿ ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ.
ಈ ವಂದೇ ಭಾರತ್ ರೈಲು ಬುಧವಾರ ಒಂದು ದಿನ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಸಂಚಾರ ನಡೆಸಲಿದೆ. ಸಂಸದರ ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರುವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಮಂಗಳೂರು ರೈಲು ನಿಲ್ದಾಣ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಸೇರಿದ್ದರೂ, ವಂದೇ ಭಾರತ್ ರೈಲನ್ನು ಕೇರಳದ ಕಾಸರಗೋಡಿನಿಂದ ತಿರುವನಂತಪುರಕ್ಕೆ ಆರಂಭಿಸಲಾಗಿತ್ತು. ಕೇರಳದ ಸಂಸದರುಗಳ ಲಾಬಿಯಿಂದ ಅಧಿಕಾರಿಗಳು ಮಂಗಳೂರನ್ನು ಗಣನೆಗೆ ತೆಗೆದುಕೊಳ್ಳದೆ ಕೇರಳಕ್ಕೆ ಆರು ತಿಂಗಳ ಮೊದಲೇ ವಂದೇ ಭಾರತ್ ರೈಲು ಓಡಾಟ ಆರಂಭಿಸಿದ್ದರು. ಇದರಿಂದ ರೈಲ್ವೇಗೆ ಲಾಭ ಇರಲಿಲ್ಲ. ಕೇರಳದ ಹೆಚ್ಚಿನ ಪ್ರಯಾಣಿಕರು ಮಂಗಳೂರಿಗೆ ಬರುತ್ತಿದ್ದರೇ ವಿನಾ ಕಾಸರಗೋಡುವರೆಗೆ ಬರುವುದು ಕಡಿಮೆಯಿತ್ತು. ಇದೀಗ ಅದೇ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಿದೆ.