ಪುತ್ತೂರು: ಅಕ್ಕನಿಗೋಸ್ಕರ ಲಿವರ್ ದಾನ ಮಾಡಿದ ತಂಗಿ - ಆದರೆ ವಿಧಿಯಾಟ ಮಾತ್ರ ಬೇರೆಯೇ ಇತ್ತು..!


ಪುತ್ತೂರು: ಜಾಂಡೀಸ್ ರೋಗಕ್ಕೆ ತುತ್ತಾಗಿ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನಿಗೆ ತಂಗಿಯೇ ಲಿವರ್ ದಾನ ಮಾಡಿದರೂ ಆಕೆಯ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದ ದಾರುಣ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ನೆಹರೂ ನಗರದ ದಿ.ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯಾ(29) ಜ.24 ರಂದು ಲಿವರ್ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಅವರಿಗೆ ಜಾಂಡೀಸ್ ಜ್ವರ ಬಾಧಿಸಿತ್ತು. ಈ ಮೊದಲು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ತಪಾಸಣೆ ನಡೆಸಿದ ವೈದ್ಯರು ಆಕೆಯ ಲಿವರ್ ಹಾನಿಯಾಗಿದ್ದು, ಲಿವರ್ ಟ್ರಾನ್ಸ್‌ಪ್ಲಾಂಟ್ ಮಾಡಬೇಕೆಂದು ತಿಳಿಸಿದ್ದರು.

ಐಶ್ವರ್ಯಾ ತಾಯಿ ಮೊದಲು ಪುತ್ರಿಗಾಗಿ ಲಿವರ್ ದಾನ ಮಾಡಲು ಮುಂದಾಗಿದ್ದರು. ಆದರೆ ಸಹೋದರಿ ಮೇಲೆ ಅಪಾರ ಪ್ರೀತಿ, ಅಕ್ಕರೆ ಹೊಂದಿದ್ದ ಬ್ಯಾಂಕ್‌ ಉದ್ಯೋಗಿ ಅನುಷಾ ತಾನೇ ಲಿವರ್ ದಾನ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಚಿಕಿತ್ಸೆಯ ಮುಂದುವರಿದ ಭಾಗವಾಗಿ ಐಶ್ವರ್ಯಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಕನಿಗೋಸ್ಕರ ಅನುಷಾ ಲಿವರ್ ದಾನ ಮಾಡಿದ್ದರೂ ವಿಧಿಯಾಟ ಬೇರೆಯದೇ ಆಗಿತ್ತು. ಐಶ್ವರ್ಯಾ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಿವ‌ರ್ ದಾನ ಮಾಡಿದ ತಂಗಿ ಅನುಷಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಜಿನಿಯರಿಂಗ್‌ ಪದವೀಧರೆಯಾಗಿದ್ದ ಐಶ್ವರ್ಯಾ ಚಿಕಿತ್ಸೆಗಾಗಿ 40 ಲಕ್ಷ ರೂ. ಖರ್ಚಾಗಿದೆ. ಅದಕ್ಕಾಗಿ ಜಾಲತಾಣಗಳಲ್ಲಿಯೂ ನೆರವು ಯಾಚಿಸಲಾಗಿತ್ತು. ಮೃತ ಐಶ್ವರ್ಯಾ ತಾಯಿ, ಸಹೋದರಿಯನ್ನು ಅಗಲಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu