ಉಳ್ಳಾಲ: ನೇತ್ರಾವತಿ ಸೇತುವೆಗೆ ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಸಾವು
Wednesday, January 24, 2024
ಉಳ್ಳಾಲ: ನಗರದ ನೇತ್ರಾವತಿ ಸೇತುವೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಮೂಲದ ಕಳೆದ ಹಲವಾರು ವರ್ಷಗಳಿಂದ ಉಳ್ಳಾಲದ ಕಲ್ಲಾಪು, ಪಟ್ಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಸುರೇಶ್ (32) ಅಪಘಾತಕ್ಕೆ ಬಲಿಯಾದ ಯುವಕ.
ಸುರೇಶ್ ಅವರು ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿದ್ದರು. ಈ ಮೊದಲು ಮಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಇತ್ತೀಚಿಗೆ ಸ್ವಂತ ಮೆಕ್ಯಾನಿಕ್ ಅಂಗಡಿ ತೆರೆದಿದ್ದರು. ಅವಿವಾಹಿತರಾಗಿದ್ದ ಸುರೇಶ್ ಹಲವು ವರುಷಗಳಿಂದ ತಂದೆ, ತಾಯಿ, ಸಹೋದರಿ ಜತೆ ಕಲ್ಲಾಪಿನಲ್ಲಿ ನೆಲೆಸಿದ್ದರು.
ಮಂಗಳವಾರ ತಡರಾತ್ರಿ ಮಂಗಳೂರಿನಿಂದ ಕಲ್ಲಾಪಿಗೆ ಸುರೇಶ್ ಬೈಕ್ ನಲ್ಲಿ ಬರುತ್ತಿದ್ದರು. ಈ ಸಂದರ್ಭ ಅವರು ನೇತ್ರಾವತಿ ಸೇತುವೆಯ ಬರುತ್ತಿದ್ದಂತೆ ಬೈಕ್ ಅಪಘಾತಕ್ಕೊಳಗಾಗಿದೆ. ಪರಿಣಾಮ ಆವರಣ ಗೋಡೆಗೆ ಸುರೇಶ್ ಅವರ ತಲೆ ಬಡಿದ ಪರಿಣಾಮ ವಿಪರೀತ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.