ನವದೆಹಲಿ: ಖ್ಯಾತ ಉದ್ಯಮಿ ಅನಿಲ್ ಅಂಬಾನಿಯವರ ಪುತ್ರ ಜೈ ಅನ್ಮೋಲ್ ಅಂಬಾನಿ ವಿರುದ್ಧ ಸಿಬಿಐ ಬಹುಕೋಟಿ ವಂಚನೆ ಪ್ರಕರಣವನ್ನು ದಾಖಲಿಸಿದೆ.
ಅನಿಲ್ ಅಂಬಾನಿ(ಎಡಿಎ) ಗ್ರೂಪ್ ಕಂಪನೀಸ್‌ನ ರಿಲಯನ್ಸ್ ಹೋಮ್ ಫೈನಾನ್ಸ್ ಲಿ.(ಆರ್‌ಎಚ್‌ಎಫ್‌ಎಲ್), ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿ. (ಆರ್‌ಸಿಎಫ್‌ಎಲ್) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈ ಅನ್ಮೋಲ್ ಅಂಬಾನಿ ಹೆಸರು ಕೂಡ ಇದೆ. ಈ ಹಿನ್ನೆಲೆಯಲ್ಲಿ ಸಿಬಿಐ ತಂಡ ಮುಂಬೈನ ಕಫೆ ಪರೇಡ್‌ನಲ್ಲಿನ ಅನಿಲ್ ಅಂಬಾನಿ ಮನೆಯಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿದೆ.
ಇವು ಒಟ್ಟು 14,852 ಕೋಟಿ ರೂ. ವಂಚನೆ ಪ್ರಕರಣ ನಡೆದಿದೆ. ಯೂನಿಯನ್ ಬ್ಯಾಂಕ್‌ಗೆ 228 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಆರ್‌ಎಚ್‌ಎಫ್‌ಎಲ್ ನಿರ್ದೇಶಕರಾಗಿದ್ದ ಜೈ ಅನ್ಮೋಲ್ ಅಂಬಾನಿ, ಮಾಜಿ ಸಿಇಒ ರವೀಂದ್ರ ಶರದ್ ಸುಧಾಕರ್ ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಇನ್ನೊಂದು ಪ್ರಕರಣದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ 57 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಆರ್‌ಸಿಎಫ್‌ಎಲ್ ಹಾಗೂ ಅದರ ಮಾಜಿ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಜೈ ಅನ್ಮೋಲ್ ಹೆಸರಿಲ್ಲ. ಯೂನಿಯನ್ ಬ್ಯಾಂಕ್ ಸೇರಿದಂತೆ ಒಟ್ಟು 18 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಆರ್‌ಎಚ್‌ಎಫ್‌ಎಲ್ ಒಟ್ಟು 5572.35 ಕೋಟಿ ರೂ. ಸಾಲ ಪಡೆದಿದೆ. ಆರ್‌ಸಿಎಫ್‌ಎಲ್ 31 ಬ್ಯಾಂಕ್-ಹಣಕಾಸು ಸಂಸ್ಥೆಗಳಿಂದ 9,280 ಕೋಟಿ ರೂ. ಸಾಲ ಪಡೆದಿದೆ.