ಪಣಜಿ: ಕಳೆದ ಶನಿವಾರ ಅರ್ಪೋರಾದ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಸಂಭವಿಸಿರುವ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ದುರಂತದ ಬೆನ್ನಲ್ಲೇ ರಾಜ್ಯ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು ಅದರಂತೆ ಲುಥ್ರಾ ಒಡೆತನದ ಮತ್ತೊಂದು ನೈಟ್ ಕ್ಲಬ್ ವಾಗೇಟರ್‌ನ ರೋಮಿಯೋ ಲೇನ್ ಅನ್ನು ತಕ್ಷಣವೇ ನೆಲಸಮಗೊಳಿಸುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ ನಡೆದ ಬಳಿಕ ಗೋವಾದಿಂದ ಪರಾರಿಯಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಶಂಕಿಸಲಾದ ಮಾಲಕರಾದ ಸೌರಭ್ ಲುಥ್ರಾ ಮತ್ತು ಗೌರವ್ ಲುಥ್ರಾ ಸಹೋದರರನ್ನು ಪತ್ತೆಹಚ್ಚಲು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಲುಥಾ ಸಹೋದರರು ವಾಗೇಟರ್ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ನಡೆಸುತ್ತಿರುವ ಎಲ್ಲ ಕ್ಲಬ್‌ಗಳು ಮತ್ತು ಕೆಫೆಗಳನ್ನು ನೆಲಸಮಗೊಳಿಸಲು ಗೋವಾ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ವಾಗೇಟರ್ ಬೀಚ್‌ನ ಪಕ್ಕದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಲೂಥ್ರಾ ಸಹೋದರರು ನಿರ್ಮಿಸಿದ್ದ ಮತ್ತೊಂದು ನೈಟ್ ಕ್ಲಬ್‌ನ ಬಗ್ಗೆ ಮಹತ್ವದ ಪುರಾವೆಗಳು ಲಭ್ಯವಾಗಿವೆ. ಈ ಕ್ಲಬ್ ಅನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಮತ್ತು ಅದಕ್ಕೆ ಯಾವುದೇ ಅಗ್ನಿ ಸುರಕ್ಷತಾ ಅನುಮತಿಗಳು, ರಚನಾತ್ಮಕ ಪರವಾನಿಗೆ ಅಥವಾ ಪರಿಸರ ಅನುಮೋದನೆಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ಇದೆ ಕಾರಣಕ್ಕೆ ಸಿಎಂ ಆರೋಪಿ ಸಹೋದರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಲಾಗಿದೆ.