ಮಂಗಳೂರು: ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲಿಸಿದ ಸುಶ್ರಾವ್ಯ


ಮಂಗಳೂರು: ನಗರದ ಸಂತ ಆಗ್ನೇಸ್ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ, ಸುಶ್ರವ್ಯಾ ಸ್ಕೇಟಿಂಗ್ ನೃತ್ಯದ ಮೂಲಕ  ವಿಶ್ವ ದಾಖಲೆ ಮಾಡಿದ್ದಾರೆ. ಡಿ12ರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಿರಂತರ 4 ಗಂಟೆಗಳ ಕಾಲ ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ಸೇರ್ಪಡಿಗೊಳಿಸಿದ್ದಾರೆ. 


ಮಂಗಳೂರು ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್ ದಂಪತಿ ಪುತ್ರಿ ಸುಶ್ರಾವ್ಯ ಸಂತ ಆಗ್ನೆಸ್ ಕಾಲೇಜು ಮಂಗಳೂರಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ. ಅವರ ಪರಿಶ್ರಮ ಮತ್ತು ಕಲಾಸಾಧನೆಗೆ ಜಾಗತಿಕ ಮಾನ್ಯತೆ ಲಭಿಸಿದೆ. ಸುಶ್ರಾವ್ಯ ಕಳೆದ 14ವರ್ಷಗಳಿಂದ ಸ್ಕೇಟಿಂಗ್ ಕ್ಷೇತ್ರದಲ್ಲಿ ತಮ್ಮ ಗುರುಗಳಾದ ಸುಮನ್ ಶ್ರೀಕಾಂತ್ ಇವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದು, ಅದೇ ರೀತಿಯಲ್ಲಿ, ಭಾರತೀಯ ಶಾಸ್ತ್ರೀಯ ನೃತ್ಯದ ಜೂನಿಯರ್ ಪರೀಕ್ಷೆಯನ್ನು ಪ್ರತಿಮಾ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸೀನಿಯರ್ ಪರೀಕ್ಷೆಯನ್ನು ಸುರೇಶ್ ಅತ್ತಾವರ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ.


 ಕಳೆದ ಎರಡು ವರ್ಷಗಳಿಂದ ಸುಶ್ರಾವ್ಯ ಕಲಾತ್ಮಕ ಸ್ಕೇಟಿಂಗ್ ಅನ್ನು ಸ್ವತಃ ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ದಾಖಲೆ ಬರೆದಿರುವ ಇವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯನ್ ಹೆಡ್ ಡಾ‌. ಮನೀಷ್ ವೈಷ್ಣೋಯಿ ಅವರು ಸಾಂಕೇತಿಕವಾಗಿ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು.