ಮಂಗಳೂರು: ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪುತ್ರಿ- ವೀಡಿಯೋ ಮಾಡಿದವರ ಮೇಲೆ ದೂರು ದಾಖಲಾದಲ್ಲಿ ಎಫ್ಐಆರ್- ಕಮಿಷನರ್


ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆ ಗ್ರಾಪಂ ಆವರಣದಲ್ಲಿ ಪುತ್ರಿಯೋರ್ವಳು ಹೆತ್ತತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸಿತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ವಾಸವಿರುವ ಈ ತಾಯಿ - ಮಗಳ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತಾಯಿ ಕಾವೂರು ಠಾಣೆಗೆ ತೆರಳಿ ದೂರು ನೀಡುತ್ತಿದ್ದರು. ಪೊಲೀಸರು ತಾಯಿ ಮತ್ತು ಮಗಳಿಗೆ ಬುದ್ಧಿ ಹೇಳಿ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ತಾಯಿಯು ಮೂಡುಶೆಡ್ಡೆ ಗ್ರಾಪಂಗೆ ತೆರಳಿ ಪುತ್ರಿಯ ವಿರುದ್ಧ ದೂರು ನೀಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಪುತ್ರಿ ತಾಯಿಯನ್ನು ಗ್ರಾಪಂ ಒಳಗಿನಿಂದ ಗ್ರಾಪಂ ಆವರಣಕ್ಕೆ ತಳ್ಳಿದ್ದಾಳೆ. ಈ ವೇಳೆ ಕುಪಿತಗೊಂಡ ತಾಯಿಯೂ ಪುತ್ರಿಗೆ ಹೊಡೆಯಲು ಹೋಗಿದ್ದಾರೆ‌. ಇದರಿಂದ ಆಕ್ರೋಶಗೊಂಡ ಪುತ್ರಿ ತಾಯಿಯನ್ನು ನೆಲದ ಮೇಲೆ ಕೆಡವಿ ಚಪ್ಪಲಿಯಿಂದ ತಾಯಿಯ ಮುಖಕ್ಕೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

ಇದನ್ನು ಗ್ರಾಪಂ ಕಚೇರಿಯಲ್ಲಿದ್ದವರು ವೀಡಿಯೋ ಮಾಡಿದ್ದಾರೆಯೇ ಹೊರತು ಯಾರೂ ತಾಯಿಗೆ ರಕ್ಷಣೆ ಕೊಡಲು ಮುಂದಾಗಿಲ್ಲ. ಅಲ್ಲಿ ಗ್ರಾಪಂನ ಕೆಲವು ಜನಪ್ರತಿನಿಧಿಗಳು, ಸಿಬ್ಬಂದಿಯಿದ್ದರೂ ತಾಯಿಗೆ ಹಲ್ಲೆ ನಡೆಸದಂತೆ ಮಗಳನ್ನು ತಡೆಯಲಿಲ್ಲ. ಈ ಬಗ್ಗೆ ಪೊಲೀಸ್ ದೂರೂ ದಾಖಲಿದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ಈ ಬಗ್ಗೆ ಮಂಗಳೂರು ನಗರ ಪೊಲೀಸ್‌ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿ ತಾಯಿ - ಮಗಳ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವೀಡಿಯೋ ಮಾಡಿ ಅದಕ್ಕೆ ಹೆಚ್ಚು ವೀಕ್ಷಣೆ ಬರುವ ಉದ್ದೇಶದಿಂದ ವೈರಲ್ ಮಾಡಿದ ವ್ಯಕ್ತಿಯ ಬಗ್ಗೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ  ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu