ಮಂಗಳೂರು: ಓಲೈಕೆ ರಾಜಕಾರಣದ ಮಾನಸಿಕತೆಯೇ ದೇಶವಿಭಜನೆಗೆ ಕಾರಣ, ಕಾಂಗ್ರೆಸ್ ರಿಯಲ್ ಕಮ್ಯುನಲ್ ಪಾರ್ಟಿ - ಸಿ.ಟಿ.ರವಿ ಆರೋಪ
Wednesday, December 6, 2023
ಮಂಗಳೂರು: ಓಲೈಕೆ ರಾಜಕಾರಣದ ಮಾನಸಿಕತೆಯಿಂದ ದೇಶವಿಭಜನೆಯಾಗಿ 40 ಲಕ್ಷ ಮಂದಿಯ ಮಾರಣಹೋಮ, ಕೋಟ್ಯಂತರ ಮಂದಿ ನಿರ್ವಸಿತರಾಗಲು ಕಾರಣವಾಯ್ತು. ಈ ಮಾನಸಿಕತೆ ಬಹಳ ಅಪಾಯಕಾರಿ, ಕೋಮುವಾದಿ ರಾಜಕೀಯ ನೀತಿಯ ಪ್ರತ್ಯಕ್ಷ ದರ್ಶನವೂ ಹೌದು. ಇಂತಹ ಓಲೈಕೆ ಮನಸ್ಥಿತಿಯ ಕಾಂಗ್ರೆಸ್ ರಿಯಲ್ ಕಮ್ಯುನಲ್ ಪಾರ್ಟಿ ಎಂದು ಮಾಜಿ ಸಚಿವ ಸಿ.ಟಿ.ರವಿ ಗಂಭೀರ ಆರೋಪ ಹೊರಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಯಾಕೆ ಸಿಎಂ ಸಿದ್ದರಾಮಯ್ಯನವರು ದೇಶದ, ರಾಜ್ಯದ ಸಂಪತ್ತು ಬಡವರಿಗೆ, ಭಾರತೀಯರಿಗೆ ಸೇರಲಿ ಎಂದು ಹೇಳಿಲ್ಲ. ಅವರು ಓಲೈಕೆ ರಾಜಕಾರಣ, ಓಟು ಬ್ಯಾಂಕ್ ಗಾಗಿಯೇ ಮುಸ್ಲಿಂ ಸಮುದಾಯಕ್ಕೆ ದೇಶದ ಸಂಪತ್ತಿನಲ್ಲಿ ಭಾಗವಿದೆ ಎಂದು ಹೇಳುತ್ತಾರೆ. ಈ ಸಂಪತ್ತು ಭಾರತೀಯತೆಯನ್ನು ಒಪ್ಪಿಕೊಂಡವರಿಗೆ ಸೇರಿದ್ದು. ಭಾರತದಲ್ಲಿಯೇ ಇದ್ದು ದ್ರೋಹ ಬಗೆಯುವವರಿಗೆ ಸೇರಿದ್ದಲ್ಲ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಲಿ ಎಂದರು.
ಸಿಎಂ ಭಾಗವಹಿಸಿದ್ದ ಹುಬ್ಬಳ್ಳಿಯ ಸಭೆಯಲ್ಲಿ ಐಎಸ್ಐ ಏಜೆಂಟ್ ಗಳಿದ್ದರು ಎಂಬ ಬಸವರಾಜ್ ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿಯವರು, ಯತ್ನಾಳ್ ಅವರು ಸುಮ್ಮನೆ ಆರೋಪ ಮಾಡಿರಲಿಕ್ಕಿಲ್ಲ. ಈ ಬಗ್ಗೆ ಸಿಬಿಐ, ಎನ್ಐಎ ವಿಶೇಷ ಗಮನಹರಿಸಲಿ. ಯಾರೆಲ್ಲಾ ಇದರ ಹಿಂದೆ ಇದ್ದಾರೆ ಎಂಬುದರ ಬಗ್ಗೆಯೂ ತನಿಖೆಯಾಗಲಿ ಎಂದರು.
ಸಿದ್ಧಾಂಗಂಗಾ ಮಠದಲ್ಲಿ ಗುರುಭವನದ ಉದ್ಘಾಟನೆ ವಿವಾದದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಈ ಕಾರ್ಯಕ್ರಮಕ್ಕೆ ಬಿಜೆಪಿಯವರನ್ನು ಕರೆಯಲಾಗಿದೆ. ಹಾಗೆಯೇ ಆ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಕರೆಯಲಾಗಿದೆ. ಕೇವಲ ಕಾಂಗ್ರೆಸ್ ನವರನ್ನೇ ಕರೆದಿದ್ದಾರೆ ಅನ್ನೋದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣವಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಪರಮೇಶ್ವರ್, ರಾಜಣ್ಣ ಅದೇ ಜಿಲ್ಲೆಯವರು ಎಂದು ಕರೆದಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಮಾಜಿ ಸಚಿವ ಸೋಮಣ್ಣ ಬಿಜೆಪಿ ಬಿಡುತ್ತಾರೆ ಎನ್ನುವುದು ತಪ್ಪು ಮಾಹಿತಿ. ಪಕ್ಷ ಹೇಳಿದ್ದಕ್ಕೆ ಅವರು ಎರಡೂ ಕಡೆ ಸ್ಪರ್ಧಿಸಿದ್ದಾರೆ. ಬಿಜೆಪಿ ಬಿಡ್ತಾರೆ ಅನ್ನೋದು ಉಹಾಪೋಹ. ಅವರು ದೆಹಲಿಗೆ ಯಾವಾಗ ಹೋಗ್ತಾರೆ ಅನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಬಿಜೆಪಿಗೆ ಬರುವವರು ಕೇವಲ ರಾಜಕೀಯ ಕಾರಣಕ್ಕೆ ಬರಲ್ಲ. ಬಿಜೆಪಿಯ ವಿಚಾರಧಾರೆ ಒಪ್ಪಿಕೊಂಡು ಬರುತ್ತಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಲೋಭಾಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಇರುತ್ತೆ ಅನ್ನೋ ವಿಶ್ವಾಸ ಕಾಂಗ್ರೆಸ್ ನವರಿಗೆ ಇಲ್ಲ. ಬಸವರಾಯರೆಡ್ಡಿ, ಬಿ ಆರ್ ಪಾಟೀಲ್ ಬಂಡಾಯ ಎದ್ದಿದ್ದಾರೆ. ಪತ್ರ ಚಳುವಳಿ ಮಾಡುತ್ತಿದ್ದಾರೆ. ಅದನ್ನು ನಾವು ಹೇಳಿಕೊಟ್ಟಿದ್ದಲ್ಲ. ಕಾಂಗ್ರೆಸ್ ನವರೇ ಹೇಳುತ್ತಾರೆ ಈ ಹಾಳಾದ ಸರಕಾರ ಯಾಕ್ ಬಂತೋ ಏನು ಎಂದು. ಒಂದು ರೂಪಾಯಿ ಕೆಲಸ ಆಗ್ತಾಯಿಲ್ಲ ಕಾಂಗ್ರೆಸ್ ನವರೇ ಬೈಯುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.