-->
1000938341
ವಿಮೆ ಹಣಕ್ಕಾಗಿ ಭಿಕ್ಷುಕನನ್ನು ಕೊಲೆಗೈದು ತನ್ನದೇ ಸಾವು ಎಂದು ಬಿಂಬಿಸಿದ ಕತರ್ನಾಕ್ ಖದೀಮ ಪೊಲೀಸ್ ಬಲೆಗೆ

ವಿಮೆ ಹಣಕ್ಕಾಗಿ ಭಿಕ್ಷುಕನನ್ನು ಕೊಲೆಗೈದು ತನ್ನದೇ ಸಾವು ಎಂದು ಬಿಂಬಿಸಿದ ಕತರ್ನಾಕ್ ಖದೀಮ ಪೊಲೀಸ್ ಬಲೆಗೆಅಹಮದಾಬಾದ್: ಹಣಕ್ಕಾಗಿ ಮನುಷ್ಯ ಎಂಥಹ ನೀಚ ಕೆಲಸಕ್ಕಾದರೂ ಇಳಿಯುತ್ತಾನೆ. ಈ ಮಾತಿಗೆ ಉದಾಹರಣೆ ಎಂಬಂಥ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದು 17 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.​ ವಿಮೆಯ ಹಣಕ್ಕೆ ನಿರ್ಗತಿಕ ಭಿಕ್ಷುಕನನ್ನು ಕೊಲೆಗೈದು ತನ್ನ ಗುರುತು ಮರೆಸಿ ಖತರ್ನಾಕ್​ ಅಸಾಮಿಯ ಪಾಪದ ಕೊಡ ತುಂಬಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಅನಿಲ್​ಸಿಂಗ್​ ವಿಜಯ್​ಪಾಲ್​ಸಿಂಗ್​ ಚೌಧರಿ ಎಂಬಾತನನ್ನು ಅಹಮದಾಬಾದ್ ನಗರದ ನಿಕೋಲ್ ಪ್ರದೇಶದಲ್ಲಿ ಬಂಧಿಸಿದ್ದಾರೆ. ಅಹಮದಾಬಾದ್​ ಕ್ರೈಂ ಬ್ರ್ಯಾಂಚ್​ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಭಟ್ಟ-ಪರ್ಸೌಲ್ ಗ್ರಾಮದ ನಿವಾಸಿ.

2006ರ ಜುಲೈ 31ರಂದು ಆಗ್ರಾದ ರಾಕಬ್​ಗಂಜ್​ ಪೊಲೀಸ್​ ಠಾಣೆಯಲ್ಲಿ ಕಾರು ಅಪಘಾತ ಪ್ರಕರಣವೊಂದು ದಾಖಲಾಗಿತ್ತು. ಅಪಘಾತದಲ್ಲಿ ಕಾರು ಹೊತ್ತು ಉರಿದು ಚಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದ. ಆ ಸಮಯದಲ್ಲಿ ಮೃತ ಚಾಲಕನನ್ನು ಅವರ ತಂದೆಯ ಹೇಳಿಕೆಯಂತೆ ಅನಿಲ್​ಸಿಂಗ್​ ವಿಜಯ್​ಪಾಲ್​ಸಿಂಗ್​ ಚೌಧರಿ ಎಂದು ಗುರುತಿಸಲಾಗಿತ್ತು. ಆದರೆ, ಇತ್ತೀಚೆಗೆ ಅಹಮದಾಬಾದ್​ ನಗರ ಕ್ರೈಂ ಬ್ರಾಂಚ್​ ಪೊಲೀಸರಿಗೆ ಅನಿಲ್​ ಸಿಂಗ್​ ಇನ್ನೂ ಜೀವಂತವಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. 

ಆತನನ್ನು ಬಂಧಿಸಿದ ಬಳಿಕ ಕಾರು ಅಪಘಾತ ಪ್ರಕರಣದ ಒಂದೊಂದೇ ಅಸಲಿಯತ್ತು ಬಯಲಾಗಿದೆ. ಸಾವಿನ ಬಳಿಕ ಇನ್ಶೂರೆನ್ಸ್​ ಹಣವನ್ನು ಪಡೆಯುವುದಕ್ಕಾಗಿ ತಾನು ಮತ್ತು ತನ್ನ ತಂದೆ ಸೇರಿಕೊಂಡು ಮಾಡಿದ ಸಂಚು ಎಂಬುದನ್ನು ಬಾಯ್ಬಿಟ್ಟಿದ್ದಾನೆ. ತಮ್ಮ ಸಂಚಿನ ಪ್ರಕಾರ ಆರೋಪಿ ಅನಿಲ್, 2004ರಲ್ಲಿ ಇನ್ಶೂರೆನ್ಸ್​ ಪಾಲಿಸಿ ಮಾಡಿದ್ದ. ಇದಾದ ಬಳಿಕ ಒಂದು ಕಾರನ್ನು ಖರೀದಿ ಮಾಡಿದ್ದ. ತಮ್ಮ ಸಂಚಿನಂತೆ ಅನಿಲ್​ ಸಿಂಗ್, ಆತನ ತಂದೆ ಮತ್ತು ಸಹೋದರರು ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನಿಗೆ ಆಹಾರದ ಆಮಿಷ ಒಡ್ಡಿ, ಆತನನ್ನು ಆಗ್ರಾದ ಹೋಟೆಲ್​ ಒಂದಕ್ಕೆ ಕರೆದೊಯ್ದು, ನಿದ್ದೆ ಬರುವಂತಹ ಔಷಧಿಯನ್ನು ಬೆರೆಸಿದ ಆಹಾರವನ್ನು ಕೊಟ್ಟಿದ್ದರು.

ಆರೋಪಿಗಳು ನೀಡಿದ ಆಹಾರವನ್ನು ತಿಂದ ಭಿಕ್ಷುಕ ಗಾಢ ನಿದ್ರೆಗೆ ಜಾರಿದ್ದ. ಆತನನ್ನು ಕಾರಿನಲ್ಲಿಟ್ಟು, ಅಪಘಾತ ಎಂಬಂತೆ ಬಿಂಬಿಸಲು ಒಂದು ವಿದ್ಯುತ್​ ಕಂಬಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದರು. ಕಾರಿನ ಸೀಟಿನಲ್ಲಿ ಭಿಕ್ಷುಕನನ್ನು ಕೂರಿಸಿ ಬೆಂಕಿ ಹಚ್ಚಿದ್ದರು. ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಆರೋಪಿಗಳು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಅನಿಲ್​ ಅವರ ತಂದೆ ವಿಜಯ್​ಪಾಲ್​ಸಿಂಗ್​ ಸುಟ್ಟು ಕರಕಲಾಗಿದ್ದ ಮೃತದೇಹವನ್ನು ಪತ್ತೆಹಚ್ಚಿದ್ದರು. ಅಲ್ಲದೆ, ಮೃತದೇಹವನ್ನು ಎಲ್ಲ ವಿಧಿವಿಧಾನಗಳೊಂದಿಗೆ ಗೌತಮ್​ ಬುದ್ಧ ನಗರ ಜಿಲ್ಲೆಯ ತಮ್ಮ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದಾದ ಬಳಿಕ ಯೋಜನೆಯಂತೆ ಅನಿಲ್​ ಅವರ ತಂದೆ ವಿಜಯ್​ಪಾಲ್​ಸಿಂಗ್​, ತಮ್ಮ ಮಗನ ಅಪಘಾತ ಮರಣ ವಿಮೆ ಮೊತ್ತ 80 ಲಕ್ಷ ರೂ.ವನ್ನು ಕ್ಲೈಮ್ ಮಾಡಿ, ಬಂದ ಹಣದಲ್ಲಿ ಕುಟುಂಬ ಸದಸ್ಯರಿಗೆ ವಿತರಿಸಿದ್ದರು.

ತನ್ನ ಪಾಲಿನ ಹಣವನ್ನು ಪಡೆದುಕೊಂಡ ಅನಿಲ್​ಸಿಂಗ್​ ಚೌಧರಿ 2006ರಲ್ಲಿ ಅಹಮದಾಬಾದ್​ಗೆ ಬಂದು ನೆಲೆಸಿದ್ದ. ಅಂದಿನಿಂದ ಒಮ್ಮೆಯೂ ತನ್ನ ಗ್ರಾಮಕ್ಕೆ ಅನಿಲ್​ ಹಿಂತಿರುಗಿರಲಿಲ್ಲ. ಅನಿಲ್​ಸಿಂಗ್​ ಅಂತ ಇದ್ದ ಹೆಸರನ್ನು ರಾಜ್​ಕುಮಾರ್​ ಚೌಧರಿ ಎಂದು ಬದಲಾಯಿಸಿಕೊಂಡಿದ್ದಾನೆ. ಅಲ್ಲದೆ, ಇದೇ ಹೆಸರಿನಲ್ಲಿ ಡ್ರೈವಿಂಗ್​ ಲೈಸೆನ್ಸ್​ ಮತ್ತು ಆಧಾರ್​ ಕಾರ್ಡ್​ ಸಹ ಹೊಂದಿದ್ದಾನೆ. ಆಟೋ ರಿಕ್ಷಾ ಒಂದನ್ನು ಖರೀದಿ ಮಾಡಿದ್ದ. ಬಳಿಕ ಸಾಲದ ಮೇಲೆ ಕಾರು ಖರೀದಿ ಮಾಡಿ ಜೀವನ ಸಾಗಿಸುತ್ತಿದ್ದ.

ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಹಮದಾಬಾದ್​ಗೆ ಬಂದ 17 ವರ್ಷಗಳಿಂದ ತಮ್ಮ ಊರಿಗೆ ಮರಳುವುದಾಗಲಿ ಅಥವಾ ಆತನ ಕುಟಂಬದ ಸದಸ್ಯರಿಗೆ ಕರೆ ಮಾಡುವುದಾಗಲಿ ಮಾಡಿರಲಿಲ್ಲ. ಆದರೆ, ಪಾಪದ ಕೊಡ ತುಂಬಿತು ಎಂಬಂತೆ ಅನಿಲ್​ ಸಿಂಗ್​ ನಿಜ ಬಣ್ಣ ಬಯಲಾಗಿದ್ದು, ಯಾರೋ ನೀಡಿದ ಸರಿಯಾದ ಸುಳಿವಿನ ಮೇರೆಗೆ ಆತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿ ಅನಿಲ್​ನನ್ನು ಉತ್ತರ ಪ್ರದೇಶ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article