ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ - ಮತ್ತೆ ಐವರು ಅರೆಸ್ಟ್
Tuesday, October 17, 2023
ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರನ್ನು ರವಿವಾರ ಮಂಗಳೂರು ಪೊಲೀಸರು ಬಂಧಿಸಿದದ್ದರು. ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿರುವ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮೂಡುಬಿದಿರೆಯ ಬೆಳುವಾಯಿ ಗ್ರಾಮದ ನವೀದ್ (30) ಪಡುಮಾರ್ನಾಡು ಗ್ರಾಮದ ಉಮೇಶ್ (40) ಪ್ರಸಾದ್ ದೇವಾಡಿಗ (35 ) ಮಾರ್ಪಾಡಿ ಗ್ರಾಮದ ಸುಖೇಶ್ ಆಚಾರ್ಯ (33 ) ಪುತ್ತಿಗೆ ಗ್ರಾಮದ ಪುರಂದರ ಕುಲಾಲ್ (38) ಬಂಧಿತ ಆರೋಪಿಗಳು.
ಮೂಡುಬಿದರೆಯ ಅಲಂಗಾರುವಿನಲ್ಲಿ ಎಸ್.ಐ ಸ್ಪೋರ್ಟ್ಸ್ ಅಂಗಡಿಯ ಎದುರು ನವೀದ್ ಎಂಬಾತನು ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು Comfort Zone 247 ಎಂಬ ಮೊಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಪೊಲೀಸರು ನವೀದ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಆತ ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್ ಹಿನ್ನೆಲೆ ಬೆಟ್ಟಿಂಗ್ ನಡೆಸಿ ಹಣವನ್ನು ಗೂಗಲ್ ಪೇ ಅಥವಾ ಪೋನ್ ಪೇ ಮುಖಾಂತರ ಪಡೆದಿರುವುದಾಗಿ ತಿಳಿಸಿದ್ದಾನೆ. Comfort Zone 247 ಎಂಬ ವೆಬ್ ಸೈಟ್ ನ್ನು ಮುಂಬೈನಲ್ಲಿರುವ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾನೆಂದು ತಿಳಿಸಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಮೂಡಬಿದಿರೆಯ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆಯ ಕಡಲಕೆರೆ ಪಾರ್ಕ್ ನಲ್ಲಿ ಸುಖೇಶ್ ಆಚಾರ್ಯ ಎಂಬಾತ ಪುರಂದರ್ ಎಂಬಾತನಿಂದ ಹಣವನ್ನು ಪಡೆದು allpaanel.com/m/home ಎಂಬ ಮೊಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದನು. ಈ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಸುಖೇಶ್ ಆಚಾರ್ಯನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದರಂತೆ ಆತ ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್ ನಲ್ಲಿ ಹಣ ಪಡೆದು ಬೆಟ್ಟಿಂಗ್ ದಂಧೆ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ.
ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.